
ಕೋಲಾರ ಆ.೬- ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ೫ ವರ್ಷದೊಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಸರ್ಕಾರ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ೫.೦ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ತೀವ್ರತರ ಮಿಷನ್ ಇದ್ರ ಧನುಷ್ ೫.೦ ಕಾರ್ಯಕ್ರಮ ವನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೨೦೨೩ ರ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಗುರಿಯಿದೆ. ಈ ರೋಗಗಳ ವಿರುದ್ಧ ಲಸಿಕಾ ಪ್ರಕ್ರಿಯೆ ಹಾಗೂ ಪಿಸಿವಿ ೩ನೇ ಡೋಸ್ ಲಸಿಕಾ ಪ್ರಕ್ರಿಯೆಯ ವೇಗ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಲಸಿಕಾಕರಣದ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ೩ ಸುತ್ತುಗಳಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನವು ಆಗಸ್ಟ್(೭ರಿಂದ ೧೨ರವರೆಗೆ), ಸೆಪ್ಟೆಂಬರ್ (೧೧ರಿಂದ ೧೬ರವರೆಗೆ) ಮತ್ತು ಅಕ್ಟೋಬರ್ (೯ರಿಂದ ೧೪ರವರೆಗೆ) ತಿಂಗಳುಗಳಲ್ಲಿ ನಡೆಯಲಿದ್ದು, ಪ್ರತಿ ತಿಂಗಳಲ್ಲಿ ೬ ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇಂದ್ರಧನುಷ್ ೫.೦ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಳ್ಳಿಗಳು, ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಸಂಬಂಧ ಆರೋಗ್ಯಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ಆಗಬೇಕು. ಲಸಿಕೆ ನೀಡುವಾಗ ಮಕ್ಕಳ ಆರೋಗ್ಯ ಪರಿಸ್ಥಿಯನ್ನು ಪರೀಕ್ಷಿಸಿ ನೀಡಬೇಕು. ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಜಗದೀಶ್ ಅವರು ಮಾತನಾಡಿ ೩ ಸುತ್ತುಗಳಲ್ಲಿ ನಿರ್ಧಿಷ್ಟ ೬ ದಿನಗಳಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು ೦೫ ವರ್ಷದ ಮಕ್ಕಳನ್ನು UWIಓ ಪೋರ್ಟಲ್ ಮೂಲಕ ನೊಂದಾಯಿಸಿಕೊಂಡು ಲಸಿಕಾಕರಣ ನಡೆಸಲಾಗುವುದು. ಕಾರ್ಯಕರ್ತೆ/ಆಶಾ ಜಿಲ್ಲೆಯ ಎಲ್ಲಾ ಸಾರ್ವಜನಿಕರು ತಮ್ಮ ಸಮೀಪದ ಅಂಗನವಾಡಿ ಕಾರ್ಯಕರ್ತೆ/ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರವರನ್ನು ಸಂಪರ್ಕಿಸಿ ೦೫ ವರ್ಷದ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬಹುದು. ಜಿಲ್ಲೆಯಾದ್ಯಂತ ಐ.ಎಂ.ಐ ಮೊದಲನೇ ಸುತ್ತಿಗೆ ಒಟ್ಟು ೫೧೪ ಗರ್ಭಿಣಿ ಮಹಿಳೆಯರು. ೦೨ ವರ್ಷದ ಮಕ್ಕಳು ೨೭೧೯ ಹಾಗೂ ೨೫ ವರ್ಷದ ೩೩೯ ಮಕ್ಕಳನ್ನು ಗುರುತಿಸಲಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ೪೬೬ ಐ.ಎಂ.ಐ ಲಸಿಕಾ ಸತ್ರಗಳಲ್ಲಿ ಲಸಿಕೆ ನೀಡಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಭಾಸ್ಕರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ , ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಸನ್ನಕುಮಾರ್, ಕಾರ್ಮಿಕ ಅಧಿಕಾರಿ ಶಭಾನ ಅಜ್ಮಿ,ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.