
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೩:ಬೆಂಗಳೂರಿನ ಬೆಳವಣಿಗೆಯ ದೂರದೃಷ್ಟಿ ಇಟ್ಟುಕೊಂಡು ಐದು ದಶಕದ ಹಿಂದೆಯೇ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸಿ ಮಹತ್ವದ ಕಾರ್ಯವನ್ನು ವಿವಿಧ ಕ್ರೈಸ್ತ ಮಿಷನರಿಗಳು ಮಾಡಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶನಿವಾರ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ವಜ್ರ ಮಹೋತ್ಸವದಲ್ಲಿ ಮಾತನಾಡಿದ ಅವರು, ೧೯೬೦ರಲ್ಲಿ ಕೇವಲ ೧೦ ಲಕ್ಷ ಜನಸಂಖ್ಯೆ ಹೊಂದಿದ್ದ ಬೆಂಗಳೂರಿನ ಜನತೆಗೆ ಉತ್ತಮ ಆರೋಗ್ಯ ಚಿಕಿತ್ಸೆ ದೊರೆಯಬೇಕೆಂಬ ದೃಷ್ಟಿಯಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆರಂಭಿಸಲಾಯಿತು ಎಂದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ೬೦ ವರ್ಷ ತುಂಬಿರುವ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮಾತನಾಡಿದರು.
ಇದೇ ವೇಳೆ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ವಜ್ರ ಮಹೋತ್ಸವ ಅಂಗವಾಗಿ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ ಬಿಡುಗಡೆ ಮಾಡಲಾಯಿತು. ಹರ್ ಘರ್ ತಿರಂಗಾ ೨.೦ ಅಭಿಯಾನದ ಅಂಗವಾಗಿ ಗಣ್ಯರಿಗೆ ರಾಷ್ಟ್ರಧ್ವಜ ನೀಡಲಾಯಿತು. ಗ್ರಾಮೀಣ ಮತ್ತು ಹಿಂದುಳಿದ
ಪ್ರದೇಶದ ಸೇವೆಗಾಗಿ ಡಾ. ಸಿಲಿಯಾ ಅವರಿಗೆ ೨೦೨೩ನೇ ಸಾಲಿನ ಡಾ. ಮೇರಿ ಗ್ಲೋವರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಿಬಿಸಿಐ ಅಧ್ಯಕ್ಷ ಹಾಗೂ ಧರ್ಮಾಧ್ಯಕ್ಷ ಆಂಡ್ರೋಸ್ ಥಳತ್, ಬೆಂಗಳೂರು ಆರ್ಚ್‌ಬಿಷಪ್ ಪೀಟರ್ ಮಚಾಡೊ, ಸೇಂಟ್ ಜಾನ್ಸ್ ಉಪಸ್ಥಿತರಿದ್ದರು.