ಮಿಶ್ರಲಸಿಕೆ ಶೀಘ್ರ ಪ್ರಯೋಗ

ನವದೆಹಲಿ, ಮೇ ೩೧- ದೇಶದಲ್ಲಿ ಕೊರೋನೋ ಸೋಂಕಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ಮಿಶ್ರಣ ಮಾಡಿ ನೀಡುವ ಪ್ರಯೋಗ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೋವಿ ಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ಪ್ರತ್ಯೇಕವಾಗಿ ಎರಡು ಡೋಸ್ ನೀಡಲಾಗುತ್ತಿದೆ. ಹೀಗಾಗಿ ಎರಡು ಲಸಿಕೆಗಳನ್ನು ಮಿಶ್ರಣಮಾಡಿ ನೀಡುವುದರಿಂದ ಅದರಿಂದ ಎದುರಾಗುವ ಅಡ್ಡಪರಿಣಾಮಗಳು ಸೇರಿದಂತೆ ಇನ್ನಿತರ ಮಾಹಿತಿಯನ್ನು ಕಲೆ ಹಾಕಲು ಸಂಶೋಧಕ ತಂಡ ನಿರ್ಧರಿಸಿದೆ.
ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಎರಡು ಲಸಿಕೆಯನ್ನು ಮಿಶ್ರಣಮಾಡಿ ನೀಡುವ ಸಾಧ್ಯತೆಗಳಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಲಸಿಕಾ ಗುಂಪಿನ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್ ಕೆ.ಅರೋರಾ ಮಾಹಿತಿ ನೀಡಿದ್ದು ಸದ್ಯದಲ್ಲೇ ಎರಡು ಲಸಿಕೆಗಳನ್ನು ಮಿಶ್ರಣಮಾಡಿ ಜನರ ಮೇಲೆ ಪ್ರಯೋಗ ಮಾಡುವ ಕೆಲಸ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ನೀಡಲಾಗುತ್ತಿರುವ ಎರಡು ಲಸಿಕೆಯ ಜೊತೆಗೆ ಎಂಟು ಲಸಿಕೆಯನ್ನು ಮಿಶ್ರಣ ಮಾಡಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೋವಾಕ್ಸಿನ್,ಕೋವಿಶೀಲ್ಡ್ ಲಸಿಕೆಯನ್ನು ದೇಶದಲ್ಲಿ ಜನರಿಗೆ ನೀಡಲಾಗುತ್ತಿದ್ದು, ಇದರ ಜೊತೆಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಪ್ರಯೋಗಕ್ಕೂ ಅನುಮತಿ ನೀಡಿದೆ.