ಮಿಯ್ಯಾಪುರದ ಅಸ್ಪೃಶ್ಯತೆ ಘಟನೆಗೆ ಖಂಡನೆ

ದೇವದುರ್ಗ.ಸೆ.೨೪-ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಗ್ರಾಮದ ದೇವಸ್ಥಾನ ಪ್ರವೇಶಿಸಿದ ದಲಿತ ವ್ಯಕ್ತಿ ಹಾಗೂ ಆತನ ಮಗಗೆ ೨೫ಸಾವಿರ ದಂಡ ವಿಧಿಸಿದ ಘಟನೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗುರುವಾರ ಪ್ರತಿಭಟನೆ ನಡೆಸಿತು.
ಮಿಯ್ಯಾಪುರ ಗ್ರಾಮದ ದಲಿತ ವ್ಯಕ್ತಿ ತಮ್ಮ ಮಗುವಿನ ಹುಟ್ಟುಹಬ್ಬದ ಹಿನ್ನೆಲೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ತೆರಳಿದ್ದಾರೆ. ಏನೂ ಅರಿಯದ ಆತನ ಎರಡು ವರ್ಷದ ಮಗು ದೇವಸ್ಥಾನದ ಒಳಗೆ ಪ್ರವೇಶ ಮಾಡಿದ್ದನ್ನು ಅಲ್ಲಿನ ಕೆಲ ಸವರ್ಣೀಯರು ಸಹಿಸದೆ ನಿಂದನೆ ಮಾಡಿದ್ದಾರೆ.
ದೇವಸ್ಥಾನದ ಒಳಗೆ ಹೋಗುವುದು ತಪ್ಪೇ?. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ದೇಶದ ಸರ್ವರಿಗೂ ಸಮಾನ ಹಕ್ಕುಗಳಿವೆ. ಇದನ್ನು ಮರೆತ ಗ್ರಾಮದ ಕೆಲ ಸವರ್ಣೀಯರು ಮಗುವಿನ ತಂದೆಗೆ ೨೫ ಸಾವಿರ ರೂ. ದಂಡ ವಿಧಿಸಿದ್ದಾರೆ. ಇದು ಅಮಾನವೀಯ ಕೃತ್ಯ. ಇಂಥ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಘಟನೆಗೆ ಕಾರಣವಾದವರ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ದಲಿತ ವ್ಯಕ್ತಿ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಭದ್ರತೆ ಕೈಗೊಳ್ಳಬೇಕು. ಹೋರಾಟಗಾರರ ಮೇಲೆ ದಾಖಲಾದ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ, ಶಿರಸ್ತೇದಾರ್ ಮಂಜುನಾಥಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರ, ಭೀಮರಾಯ ಭಂಡಾರಿ, ಮಲ್ಲಯ್ಯ ಸಿಂಗ್ರಿ, ಶ್ಯಾಮಸುಂದರ್, ಭೀಮಾಶಂಕರ ಯರಮಸಾಳ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ರಾಜಪ್ಪ ಸಿಂಗ್ರಿ ಇತರರಿದ್ದರು.