ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಮಂಡ್ಯ.ಜೂ.29:- ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಉಂಟಾಗಿರುವ ತೊಂದರೆಗಳ ಬಗ್ಗೆ ಮಂಗಳವಾರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಪರಿಶೀಲಿಸುವಂತೆ ತಿಳಿಸಿದ್ದರು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಮಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವಿವಿಧ ವಾರ್ಡ್ ಗಳಿಗೆ ತೆರಳಿ ಗರ್ಭಿಣಿಯರು ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿದರು. ಮೂಲಭೂತ ಸಮಸ್ಯೆ ಬಗ್ಗೆ ಮಾಹಿತಿ ಕಲೆಹಾಕಿ ವೈದ್ಯಕೀಯ ಸೇವೆಯ ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲನೆ ಮಾಡಿದರು.
ಸ್ಥಳವಕಾಶದ ಕೊರತೆಯಿಂದ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಂತಹ ರೋಗಿಗಳು ಹಾಗೂ ರೋಗಿಯನ್ನು ಆರೈಕೆ ಮಾಡಲು ಬರುವವರು ಕೂರಲು ಕುರ್ಚಿಗಳಿಲ್ಲದೆ ನೆಲದಲ್ಲಿ ಕುಳಿತುಕೊಳ್ಳುತ್ತಿದ್ದಾರೆ, ಇದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ತಕ್ಷಣವೇ ಕುರ್ಚಿ ಹಾಕಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳಾವಕಾಶದ ಕೊರತೆ ಇರುವುದರಿಂದ ಕುರ್ಚಿಗಳನ್ನು ಎಲ್ಲಿ ಸ್ಥಳಾವಕಾಶ ಇದೆ, ಅಲ್ಲಿ ಕುರ್ಚಿಗಳನ್ನು ಖಾಯಂ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಇನ್ನು ಮುಂದೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ನೆಲದಲ್ಲಿ ಕೂರದೇ ಕುರ್ಚಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗುವುದು ಎಂದರು.
ಕ್ಯಾನ್ಸರ್ ಕೇರ್ ಸೆಂಟರ್ ಗೆ ಸಂಬಂಧ ಪಟ್ಟಂತೆ ಕಾಮಗಾರಿಗಳಿಗೆ 5 ಕೋಟಿ ಅನುದಾನ ಬಿಡುಗಡೆಯಾಗಬೇಕಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ವಿವಿಧ ಖಾಯಿಲೆಗಳ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಉಪಕರಣ ಸಲಕರಣೆಗಳಿಗೆ ಸಂಬಂಧಪಟ್ಟಂತೆ 10 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು
ಇದೇ ಸಂದರ್ಭದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಬಿ.ಜೆ ಮಹೇಂದ್ರ, ಅಧೀಕ್ಷಕರಾದ ಡಾ.ಶ್ರೀಧರ್ ಸೇರಿದಂತೆ ಇನ್ನಿತರರು ಅಧಿಕಾರಿಗಳು ಇದ್ದರು.