ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 26 :- ಲೋಡ್ ಇಲ್ಲದ ಖಾಲಿ ಇರುವ ಮಿನಿ ಗೂಡ್ಸ್ ವಾಹನವೊಂದರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಡ್ಡ ಕಟ್ಟಿದ ಕಬ್ಬಿಣದ ಸಲಾಕೆಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಇಬ್ಬರಿಗೆ ಗಾಯವಾಗಿರುವ ಘಟನೆ ಇಂದು ನಸುಕಿನ ಜಾವ ತಾಲೂಕಿನ ಇಮಡಾಪುರ ಸಮೀಪದ ಐನಾಪೂರಿ ಡಾಬಾ ಹತ್ತಿರದ ಹೈವೇ 50ರ ರಸ್ತೆಯಲ್ಲಿ ಜರುಗಿದೆ.
ಕೊಲ್ಲಾಪುರದ ಮಿನಿವಾಹನದ ಚಾಲಕ ಅಶೋಕ ಮಂಡಾವ್ (25) ಹಾಗೂ ಸಹೋದರ ಅಪ್ಪು ಮಂಡಾವ್ (30) ಗಾಯಗೊಂಡವರಾಗಿದ್ದಾರೆ. ಇವರುಗಳು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದಿದೆ. ಇವರುಗಳು ದಾವಣಗೆರೆಯಿಂದ ಮಹಾರಾಷ್ಟ್ರಕ್ಕೆ ಮಿನಿ ಗೂಡ್ಸ್ ವಾಹನದಲ್ಲಿ ಹೈವೇ50ರಲ್ಲಿ ಹೋಗುತ್ತಿರುವಾಗ್ಗೆ ಇಂದು ನಸುಕಿನ ಜಾವ 3ಗಂಟೆ ಸುಮಾರಿಗೆ ತಾಲೂಕಿನ ಇಮಡಾಪುರ ಗ್ರಾಮದ ಹತ್ತಿರದಲ್ಲಿ ರಸ್ತೆ ಸುರಕ್ಷತೆಗೆ ರಸ್ತೆ ಬದಿ ಹಾಕಲಾಗಿರುವ ಕಬ್ಬಿಣದ ಸಲಾಖೆಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿ ವಾಹನ ಪಲ್ಟಿಯಾಗಿದ್ದು ಚಾಲಕ ಅಶೋಕ್ ಮಂಡಾವ್ ವಾಹನದಡಿ ಸಿಲುಕಿಕೊಂಡಿದ್ದು ಇಮಡಾಪುರ ಗ್ರಾಮದ ಯುವಕರು ಆತನನ್ನು ಹೊರತೆಗೆದು ರಕ್ಷಿಸಿ ಪ್ರಾಣ ಉಳಿಸಿದ್ದಾರೆ ಮತ್ತು ಚಾಲಕನ ಸಹೋದರ ಸಹ ಇದ್ದು ಈತನಿಗೆ ಸಣ್ಣಪುಟ್ಟ ಗಾಯಗಳಾಗಿವೆ ತಕ್ಷಣ ಇವರುಗಳನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ಚಿಕಿತ್ಸೆಗೆ ತೀವ್ರಗಾಯಳು ಚಾಲಕನನ್ನು ದಾವಣಗೆರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದಿದೆ. ಘಟನಾ ಸ್ಥಳಕ್ಕೆ ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ಹಾಗೂ ಹೊಸಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದಿದೆ.