ಮಿನಾಸಪೂರ: ಭತ್ತದ ಗದ್ದೆಗೆ ನುಗ್ಗಿದ ಕೆರೆ ನೀರು: 50 ಎಕರೆ ಭತ್ತ ನೀರುಪಾಲು

ಗುರುಮಠಕಲ್ :ಸೆ.16: ಈ ಬಾರಿಯ ಉತ್ತಮವಾಗಿ ಸುರಿದ ಮುಂಗಾರು ಮಳೆ ಹಾಗೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆ ಹಾಗೂ ರಾತ್ರಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಮಿನಾಸಪೂರ ಕೆರೆಯು ತುಂಬಿ ಹೆಚ್ಚಾದ ನೀರು ಪಕ್ಕದ ಭತ್ತದ ಗದ್ದೆಗೆ ನುಗ್ಗಿದ್ದರಿಂದ ರೈತರು ಕಣ್ಣೀರು ಹಾಕುವಂತಾಗಿದೆ.

ಹಿಂದಿನ ಕಾಲದಲ್ಲಿ ಕೆರೆಗಳನ್ನು ನಿರ್ಮಿಸುವಾಗ ಕೆರೆಗಳು ತುಂಬಿದ ನಂತರ ನೀರಹಳ್ಳಗಳ ಮೂಲಕ ಮುಂದೆ ಸಾಗುತ್ತಾ, ಅನಪೂರ, ಇಡ್ಲೂರು ಕೆರೆಗಳನ್ನು ತುಂಬುತ್ತಾ ಕೊನೆಗೆ ಚಲ್ಹೇರಿ ಗ್ರಾಮದ ನಂತರ ದೊಡ್ಡ ಹಳ್ಳಕ್ಕೆ ಸೇರುವಂತೆ ವ್ಯವಸ್ಥೆಯಿತ್ತು. ಆದರೆ ಆ ಹಳ್ಳಗಳಲ್ಲಿ ಈಗ ನೀರು ಸರಾಗವಾಗಿ ಹರಿಯುವುದಕ್ಕೆ ಸಾಧ್ಯವಿಲ್ಲದಂತಾಗಿರುವುದರಿಂದ ಕೆರೆ ತುಂಬಿದ ನಂತರ ಹಳ್ಳಗಳಿಂದ ನೀರು ಜಮೀನಿನತ್ತ ಧಾವಿಸುತ್ತಿದೆ ಎಂದು ಸಮಸ್ಯೆಯನ್ನು ಕುರಿತು ವಿವಿರಿಸುತ್ತಾರೆ ಹಿರಿಯ ರೈತ ಹಣಮಂತ ಕುಂಬಾರ.

ಕಳೆದ ಹತ್ತುವರ್ಷಗಳ ಹಿಂದೆ ಇಂತಹದ್ದೆ ಸಮಸ್ಯೆಯಾದಾಗ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು, ಅದಕ್ಕೆ ಸ್ಪಂದಿಸಿದ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನವನ್ನೂ ನೀಡಿತ್ತು. ಇನ್ನೇನು ಸಮಸ್ಯೆ ಪರಿಹಾರವಾಯ್ತು ಎಂದೆ ಎಲ್ಲರೂ ಭಾವಿಸಿದ್ದೆವು.

ಆದರೆ ಜಿಲ್ಲಾ ಪಂಚಾಯತಿ, ಜಲನಯನ, ಸಣ್ಣ ನೀರಾವರಿ, ನೀರಾವರಿ ಸೇರಿದಂತೆ ಇಲಾಖೆಗಳು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣಿಚಿಕೊಂಡವು. ಈಗಲಾದರೂ ಯಾವುದೋ ಒಂದು ಇಲಾಖೆ ಸಮಸ್ಯೆಯನ್ನು ಬಗೆಹರಿಸುವತ್ತ ಮುಂದಾಗಬೇಕು ಎಂದು ರೈತರಾದ ತಿಮ್ಮಪ್ಪ ಬೋಯಿನ್, ಚಂದಪ್ಪ, ನಾಗಪ್ಪ ಮನವಿ ಮಾಡಿದರು.

ಕೆರೆ ತುಂಬಿ ನೀರು ಹರಿದ ಪರಿಣಾಮವಾಗಿ ಉತ್ತಮವಾದ ಫಸಲನ್ನು ನೀಡಬೇಕಿದ್ದ ಭತ್ತದ ಗದ್ದೆಗಳು ಈಗ ಸಂಪೂರ್ಣ ಜಲಾವೃತವಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ನಾವು ಕಷ್ಟಪಟ್ಟು ಬೆಳೆದ ಬೆಳೆ ಹೀಗೆ ನೀರುಪಾಲಾಗಿದ್ದು, ನಮ್ಮ ಸಮಸ್ಯೆಯನ್ನು ಪರಿಹರಿಸುವತ್ತ ಇಲಾಖೆಗಳು ನಿಧಾನಗತಿ ಅನುಸರಿಸಿದ್ದರಿಂದ ಇಂದು ನಾವೆಲ್ಲಾ ಅಳುವಂತೆ ಮಾಡಿದೆ ಎಂದು ತಮ್ಮ ಅಸಹಾಯಕತೆಗೆ ಭೀಮಶಂಕರು ಕಣ್ಣೀರು ಹಾಕಿದರು.

ಈಗಾಗಲೆ ಹಳ್ಳದ ಮೂಲಕ ಹರಿದು ಮುಂದೆ ಹೋಗಬೇಕಿದ್ದ ಕೆರೆ ತುಂಬಿ ಹೆಚ್ಚಾದ ನೀರು ಜಮೀನುಗಳಿಗೆ ನುಗ್ಗಿದ್ದರ ಪರಿಣಾಮ ಸುಮಾರ 50 ರಿಂದ 80 ಎಕರೆಯಷ್ಟು ಜಮೀನಿನ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು ಅತ್ತ ಬೆಳೆಯೂ ಸಿಗದೆ ಇತ್ತ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಯೂ ಇಲ್ಲದೆ ರೈತರು ಕಣ್ಣೀರು ಹಾಕುವಂತಾಗಿದ್ದು ವಿಪರ್ಯಾಸ.


“ಹತ್ತು ವರ್ಷಗಳ ಹಿಂದೆಯೆ ಈ ಕುರಿತು ಸರ್ಕಾರದ ಹಂತದವರೆಗೂ ಮನವಿ ಸಲ್ಲಿಸಿದ್ದೆವಾದರೂ ಸಮಸ್ಯೆಯನ್ನು ಬಗೆಹರಿಸಲು ಇಲಾಖೆಗಳು ನುಣಿಚಿಕೊಂಡಿದ್ದು, ಈಗ ಮತ್ತದೆ ಸಮಸ್ಯೆ ಉಂಟಾಗಿದೆ”

- ಹಣಮಂತ ಕುಂಬಾರ, ರೈತ