
ಪ್ಯಾರಿಸ್, ಎ.೧೩- ಇತ್ತೀಚಿಗೆ ತೈವಾನ್ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಫ್ರಾನ್ಸ್ ಅಧ್ಯಕ್ಷ ಎಮಾನುವೆಲ್ ಮ್ಯಾಕ್ರನ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅದೂ ಅಲ್ಲದೆ ಅಮೆರಿಕಾ ವಿರುದ್ಧ ಪರೋಕ್ಷವಾಗಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಕೆಲದಿನಗಳ ಹಿಂದೆ ಚೀನಾ ಭೇಟಿಯಲ್ಲಿದ್ದ ಮ್ಯಾಕ್ರನ್, ಅಮೆರಿಕಾ ಹಾಗೂ ಚೀನಾ ನಡುವಿನ ಉಲ್ಬಣದಲ್ಲಿ ಫ್ರಾನ್ಸ್ ಸಿಲುಕಿಕೊಳ್ಳಬಾರದು ಎಂದು ಹೇಳಿಕೆ ನೀಡುವ ಮೂಲಕ ಜಾಗತಿಕವಾಗಿ ಅದರಲ್ಲೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಚ್ಚರಿಕಗೆ ಕಾರಣವಾಗಿದ್ದರು. ಎಲ್ಲರಿಗೂ ತಿಳಿದಿರುವಂತೆ ಅಮೆರಿಕಾ ತೀರಾ ಮಿತ್ರರಾಷ್ಟ್ರವಾಗಿರುವ ಫ್ರಾನ್ಸ್ ಕಡೆಯಿಂದಲೇ ಈ ಹೇಳಿಕೆ ಬಂದಿರುವುದು ಜಾಗತಿಕ ನಾಯಕರ ಅಚ್ಚರಿಗೆ ಕಾರಣವಾಗಿತ್ತು. ಸದ್ಯ ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ನೆದರ್ಲೆಂಡ್ ಭೇಟಿಯಲ್ಲಿರುವ ಮ್ಯಾಕ್ರನ್ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕಾದ ಮಿತ್ರರಾಷ್ಟ್ರ ಎಂದ ಮಾತ್ರಕ್ಕೆ ನಾವು ಅದರ ಅಧೀನ ದೇಶವಲ್ಲ. ಮಿತ್ರರಾಷ್ಟ್ರನೆಂಬ ಮಾತ್ರಕ್ಕೆ ನಮ್ಮ ಬಗ್ಗೆ ಯೋಚಿಸುವ ಹಕ್ಕು ನಮಗಿಲ್ಲ ಎಂದರ್ಥವಲ್ಲ. ಇನ್ನು ತೈವಾನ್‌ನಲ್ಲಿ ಯಥಾಸ್ಥಿತಿ ದುವರೆಯುವ ಬಗೆಗಿನ ಫ್ರಾನ್ಸ್ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚೀನಾದ ಒಂದು ಚೀನಾ ನೀತಿಯನ್ನು ನಾವು ಬೆಂಬಲಿಸುತ್ತೇವೆ ಹಾಗೂ ಪರಿಸ್ಥಿತಿಗೆ ಶಾಂತಿಯುತ ಪರಿಹಾರ ಕಂಡುಹುಡುಕುವ ಬಗ್ಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅತ್ತ ಮ್ಯಾಕ್ರನ್ ಹೇಳಿಕೆಯನ್ನು ಬೆಂಬಲಿಸಿ ಚೀನಾ ಕೂಡ ಪ್ರತಿಕ್ರಿಯೆ ನೀಡಿದೆ. ಕೆಲವು ದೇಶಗಳು ಇತರ ರಾಷ್ಟ್ರಗಳು ಸ್ವತಂತ್ರ ಮತ್ತು ಸ್ವಾವಲಂಬಿಯಾಗುವುದನ್ನು ನೋಡಲು ಬಯಸುವುದಿಲ್ಲ ಮತ್ತು ಬದಲಿಗೆ ಯಾವಾಗಲೂ ಇತರ ದೇಶಗಳನ್ನು ತಮ್ಮ ಇಚ್ಛೆಯನ್ನು ಪಾಲಿಸುವಂತೆ ಒತ್ತಾಯಿಸಲು ಬಯಸುತ್ತವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಪರೋಕ್ಷವಾಗಿ ಅಮೆರಿಕಾವನ್ನು ಟೀಕಿಸಿದ್ದಾರೆ.