ಮಿತ್ರಕಾಲದ ವಿರುದ್ದ ಹೊರಾಟ: ಸತ್ಯವೇ ಅಸ್ತ್ರ: ರಾಹುಲ್ ಗಾಂಧಿ ಗುಡುಗು

ಸೂರತ್ ,ಏ.3- ದೇಶದಲ್ಲಿ”ಮಿತ್ರಕಾಲ” ವಿರುದ್ಧ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.

“ಇದು ಮಿತ್ರಕಾಲದ ವಿರುದ್ಧ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ ಮತ್ತು ಬೆಂಬಲ” ಎಂದು ಅವರು ಹೇಳಿದ್ದಾರೆ.

2019 ರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಲ್ಲಿ ಶಿಕ್ಷೆ ವಿರುದ್ದ ಮೇಲ್ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಹಿಂಡೆನ್‌ಬರ್ಗ್ ವರದಿಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು “ತನ್ನ ಸ್ನೇಹಿತ ಅದಾನಿಯನ್ನು ಉಳಿಸಿದ್ದಾರೆ” ಎಂದು ಟೀಕಿಸಿದ್ದಾರೆ

ರಾಹುಲ್ ಗೆ ಜಾಮೀನು:

2019 ರ ಮಾನನಷ್ಟ ಮೊಕದ್ದಮೆಯಲ್ಲಿ ಅನರ್ಹಗೊಂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಇಂದು ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಏಪ್ರಿಲ್ 13 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ರಾಹುಲ್ ಗಾಂಧಿ ಅವರ ಪರ ವಕೀಲ ಗೌರವ್ ಪಾಂಡ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ದೋಷಿ ಶಿಕ್ಷೆಯ ವಿರುದ್ಧ ರಾಹುಲ್ ಗಾಂಧಿ ಅವರ ಮೇಲ್ಮನವಿಯನ್ನು ಮೇ 3 ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.

ರಾಹುಲ್ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಮಾರ್ಚ್ 23 ರ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದರು.’ಮೋದಿ ಉಪನಾಮ’ ಕುರಿತು ಮಾಡಿದ ಮಾನನಷ್ಟ ಮೊಕದ್ದಮೆಗಾಗಿ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಶಿಕ್ಷೆಗೆ ತಡೆ ಕೋರಿ ಮನವಿ ಸಲ್ಲಿಸಿದರು.

ಈ ಹಿಂದೆ ಕೋರ್ಟ್ ತನ್ನ ಆದೇಶವನ್ನು ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ನಾಯಕನಿಗೆ 30 ದಿನಗಳ ಕಾಲಾವಕಾಶ ನೀಡಿತ್ತು.ಸೂರತ್ ನ್ಯಾಯಾಲಯದ ತೀರ್ಪಿನ ನಂತರ, ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರು ಆಯಾ ರಾಜ್ಯಗಳಿಂದ ಸೂರತ್‌ಗೆ ಆಗಮಿಸಿ ರಾಹುಲ್ ಗಾಂಧಿ ಅವರೊಂದಿಗೆ ಗುಜರಾತ್ ನ್ಯಾಯಾಲಯಕ್ಕೆ ಬಂದಿದ್ದರು. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.

ವಯನಾಡ್‌ನ ಮಾಜಿ ಸಂಸದ 2019 ರಲ್ಲಿ ಅವರ ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಮಾರ್ಚ್ 23 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೆಚ್ ಎಚ್ ವರ್ಮಾ ನ್ಯಾಯಾಲಯ ದೋಷಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.