ಮಿತಿ ಮೀರಿದ ಸೋಂಕು 469 ಸಾವು

ನವದೆಹಲಿ, ಏ.೨- ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ನಾಗಾಲೋಟದಲ್ಲಿ ಮುಂದುವರೆದಿದೆ. ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ದಾಖಲೆಯ ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ದೇಶವನ್ನು ಬೆಚ್ಚಿ ಬೀಳಿಸಿದೆ.
೬ ತಿಂಗಳ ಬಳಿಕ ಇಂದು ದೇಶದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ಮತ್ತು ಸಾವು ಸಂಖ್ಯೆ ಕಾಣಿಸಿಕೊಂಡಿರುವುದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಆತಂಕಕ್ಕೆ ದೂಡಿದೆ.
ಕಳೆದ ೨೪ ಗಂಟೆಗಳಲ್ಲಿ ೮೧,೪೬೬ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.೪೬೯ ಮಂದಿ ಮೃತಪಟ್ಟಿದ್ದು ೫೦,೩೫೬ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದಾಖಲಾಗುತ್ತಿರುವ ಸೋಂಕಿತರ ಪೈಕಿ ಮಹಾರಾಷ್ಟ್ರದಲ್ಲಿ ಶೇಕಡ ೫೦ ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ. ಮಾಡಿದಂತೆ ಕರ್ನಾಟಕ ಕೇರಳ ತಮಿಳುನಾಡು ಮಧ್ಯಪ್ರದೇಶ ಪಂಜಾಬ್ ಪಶ್ಚಿಮಬಂಗಾಳ ಸೇರಿದಂತೆ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ವನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ದಾಖಲಾಗಿರುವ ಸೋಂಕು ಪ್ರಕರಣಗಳೂ ಸೇರಿದಂತೆ ದೇಶದಲ್ಲಿ ಇಲ್ಲಿಯವರೆಗೆ ೧,೨೩,೦೩,೧೩೧ ಮಂದಿಗೆ ಸೋಂಕು ಏರಿಕೆಯಾಗಿದೆ. ಇಂದು ೫೦ ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇಲ್ಲಿಯವರೆಗೆ ಚೇತರಿಸಿಕೊಂಡರ ಸಂಖ್ಯೆ ೧,೧೫,೨೫,೦೩೯ ಏರಿಕೆಯಾಗಿದೆ.
ಸೋಂಕಿನಿಂದ ಇದುವರೆಗೂ ದೇಶದಲ್ಲಿ ೧,೬೩,೩೯೬ ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಮೇಲಿನ ಸೋಂಕು ಹೆಚ್ಚಳವಾಗುತ್ತಿರುವ ರೀತಿ ಮುಂದಿನ ದಿನಗಳಲ್ಲಿ ದೇಶವನ್ನು ಆತಂಕಕ್ಕೆ ದೂಡಲಿದೆ ಎನ್ನುವುದಕ್ಕೆ ಮುನ್ಸೂಚನೆಯಾಗಿದೆ.

೫ ಲಕ್ಷ ಸಕ್ರಿಯ ಪ್ರಕರಣ ಏರಿಕೆ:
ದೇಶದಲ್ಲಿ ಕಳದ ಒಂದೂವರೆ ತಿಂಗಳಲ್ಲಿ ಸರಿ ಸುಮಾರು ೫ ಲಕ್ಷ ಮಂದಿಗೆ ಹೊಸದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಮತ್ತಷ್ಡು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಫೆಬ್ರವರಿ ತಿಂಗಳ ಮಧ್ಯ ಭಾಗದವರೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧.೩೫ ಲಕ್ಷ ದಷ್ಟಿತ್ತು.ಈ ಸಂಖ್ಯೆ ಒಂದೂವರೆ ತಿಂಗಳಲ್ಲಿ ಸುಮಾರು ೫ ಲಕ್ಷ ಮಂದಿಗೆ ಹೆವ್ಚಳವಾಗಿದ್ದು ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೬,೧೪,೬೯೬ ಮಂದಿಗೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲು ಆರ್ ಟಿ ಪಿಸಿಆರ್ ಪರೀಕ್ಷೆ ಮೊತ್ತವನ್ನು೧೦೦೦ ರೂಪಾಯಿಂದ ೫೦೦ರೂಪಾಯಿಗೆ ಇಳಿಕೆ ಮಾಡಲಾಗಿದೆ.

೬.೮೭ ಕೋಟಿಗೆ ಲಸಿಕೆ
ದೇಶದಲ್ಲಿ ಮೂರು ಹಂತಗಳಲ್ಲಿ ಕೊರೋನಾ ಸೋಂಕಿಗೆ ಲಸಿಕೆ ಹಾಕುವ ಅಭಿಯಾನ ಪ್ರಗತಿಯಲ್ಲಿದ್ದು ಇದುವರೆಗೂ ೬,೮೭,೮೯,೧೩೮ ಲಸಿಕೆ ಹಾಕಲಾಗಿದೆ.
ಒಂದು ಕಡೆ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ದಾಖಲೆಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಮತ್ತೊಂದು ಕಡೆ ಲಸಿಕೆ ಪ್ರಮಾಣ ಹೆಚ್ಚಾಗುತ್ತಿದೆ.ಆದರೆ ಸೋಂಕು ಹೆಚ್ಚುತ್ತಿರುವ ಪ್ರಮಾಣದಲ್ಲಿ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

೮ ರಾಜ್ಯದಲ್ಲಿ ಶೇ ೮೪.೬೧ ಸೋಂಕು
ದೇಶದಲ್ಲಿ ಕೊರೊನಾ ಸೋಂಕು ಸೋಂಕು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಲ್ಲಿ ಎಂಟು ರಾಜ್ಯಗಳಲ್ಲಿ ಶೇಕಡ ೮೪.೬೧ ರಷ್ಟು ಕಾಣಿಸಿಕೊಂಡಿದೆ.
ಮಹಾರಾಷ್ಟ್ರ ಛತ್ತಿಸ್ಗಢ ಕರ್ನಾಟಕ-ಪಂಜಾಬ್ ಕೇರಳ ತಮಿಳುನಾಡು ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸಂಖ್ಯೆ ದಿನನಿತ್ಯ ಗಣನೀಯವಾಗಿ ಸೋಂಕು ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

.