ಮಿತಿ ಮೀರಿದ ಸೋಂಕು ಜನ ತಬ್ಬಿಬ್ಬು

ನವದೆಹಲಿ, ಮಾ.೨೬-ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ವ್ಯಾಪಿಸುತ್ತಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಸೋಂಕು ನಿಯಂತ್ರಣ ಅಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಳೆದ ವರ್ಷ ಅಕ್ಟೋಬರ್ ೧೭ ರ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೫೯ ಸಾವಿರ ಗಡಿ ದಾಟಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬೆಚ್ಚಿ ಬೀಳಿಸಿದೆ.
ಕಳದ ೨೪ ಗಂಟೆಗಳಲ್ಲಿ ೫೯,೧೧೮ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೨೫೭ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.೩೨,೯೮೭ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕಿನಿಂದ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ ೧,೧೮,೪೬,೬೫೨ ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧,೧೨,೬೪,೬೩೭ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೧,೬೦,೯೪೯ಕ್ಕೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರ ಒಂದೇ ರಾಜ್ಯಗಳಲ್ಲಿ ಶೇ.೫೦ಕ್ಕಿಂತಲೂ ಹೆಚ್ಚು ಪ್ರಕರಣ ದೃಢಪಡುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರಿಯಾಣ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ನಿತ್ಯ ಏರಿಕೆಯಾಗುತ್ತಿದೆ.
ಅದರಲ್ಲಿಯೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸೋಂಕು ಏರಿಕೆ ಪ್ರಮಾಣ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು ಸೋಂಕಿನಿಂದ ಪಾರಾಗುವುದು ಬೇಗ ಎನ್ನುವ ತಲೆ ಬಿಸಿ ತರಿಸಿದೆ.

ಸಕ್ರಿಯ ಪ್ರಕರಣ ಏರಿಕೆ:

ದೇಶದಲ್ಲಿ ಕೊರೋನಾ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಕ್ರಿಯ ಪ್ರಮಾಣದ ಏರಿಕೆ ರಾಕೆಟ್ ವೇಗ ಪಡೆದುಕೊಂಡಿದೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪,೨೧,೦೬೬ ಕ್ಕೆ ಏರಿಕೆಯಾಗಿದೆ.ಕಳೆದ ಒಂದೂವರೆ ತಿಂಗಳಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ೩ ಲಕ್ಷಕ್ಕೂ ಅಧಿಕವಾಗಿದೆ.
ಮಹಾರಾಷ್ಟ್ರ ಕರ್ನಾಟಕ, ಪಂಜಾಬ್, ಕೇರಳ,ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸೋಂಕು ಪ್ರಕರಣ ನಿತ್ಯ ಏರಿಕೆಯಾಗುತ್ತಿದೆ. ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬೆಚ್ಚಿ ಬೀಳಿಸಿದೆ.

೫.೫೫ ಕೋಟಿಗೆ ಲಸಿಕೆ

ದೇಶದಲ್ಲಿ ಕೊರೊನೊ ಸೋಂಕು ಸಂಖ್ಯೆ ನಿತ್ಯ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಈ ನಡುವೆ ಸೋಂಕು ನಿಗ್ರಹಕ್ಕೆ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚು ಮಾಡಲಾಗಿದೆ.
ನಿನ್ನೆ ಸಂಜೆ ತನಕ ದೇಶದಲ್ಲಿ ೫,೫೫,೦೪,೪೪೦ ಮಂದಿಗೆ ಲಸಿಕೆ ಹಾಕಲಾಗಿದೆ. ಜನವರಿ ೧೬ ಮತ್ತು ಮಾರ್ಚ್ ೧ ರಿಂದ ಮೊದಲ ಮತ್ತು ಎರಡನೇ ಹಂತದ ಲಸಿಕೆ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಲಸಿಕೆ ನೀಡಿಕೆ ಮತ್ತಷ್ಡು ಹೆಚ್ಚಳ ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮಾರ್ಗಸೂಚಿ ಪಾಲನೆಗೆ ಸೂಚನೆ

ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚನೆ ನೀಡಿದೆ. ಮಾಸ್ಕ್ ಧಾರಣೆ,ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದೆ.