ಮಿತಿಮೀರಿದ ಜನಸಂಖ್ಯೆಯಿಂದ ಅಸಮತೋಲನ: ಹಂಚಿನಮನಿ

ಬಾದಾಮಿ, ನ18- ಒಂದು ಕುಟುಂಬಕ್ಕೆ ಒಂದು ಅಥವಾ ಎರಡು ಮಕ್ಕಳಿದ್ದರೆ ಮಾತ್ರ ಅವರ ಬೆಳವಣಿಗೆಗೆ ಪೂರಕವಾದ ಎಲ್ಲ ತರಹದ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತದೆ. ಮಿತಿಮಿರಿದ ಜನಸಂಖ್ಯೆಯಿಂದ ಅಸಮತೋಲನ ವಾತಾವರಣ ನಿರ್ಮಾಣವಾಗಿ ದೇಶದ ಮತ್ತು ಕುಟುಂಬದ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಜಿ.ಪಂ ಸದಸ್ಯ ಶರಣಬಸಪ್ಪ ಹಂಚಿನಮನಿ ಹೇಳಿದರು.
ತಾಲೂಕಾಡಳಿತ, ತಾಲೂಕ ಪಂಚಾಯತ ತಾಲೂಕ ಆರೋಗ್ಯಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಪಂಚದಲ್ಲಿ ಜನಸಂಖ್ಯೆ ಮಿತಿಮಿರಿ ಬೆಳೆಯುತ್ತಿದೆ, 1650 ಕೋಟಿ ಜನಸಂಖ್ಯೆ ಹಿಡಿಯುವಷ್ಟು ಭೂಮಿಯ ಸಾಮಥ್ರ್ಯ ಸಧ್ಯ ವಿಶ್ವದಲ್ಲಿ 960 ಕೋಟಿ ಜನಸಂಖ್ಯೆ ಹೊಂದಿದ್ದು ಮುಂದಿನ ಅನಾಹುತಗಳಿಗೆ ಈ ಜನಸಂಖ್ಯಾಸ್ಪೋಟ ಕಾರಣವಾಗಲಿದ್ದು ಜಗತ್ತು ಎಚ್ಚುಕೊಳ್ಳಬೇಕಿದೆ. ಜೊತೆಗೆ ಕುಟುಂಬ ಯೋಜನೆ, ತಾಯಿ ಮಕ್ಕಳ ಆರೋಗ್ಯ, ಲಿಂಗ ಸಮಾನತೆ, ಬಡತನ ಹಾಗೂ ಮಾನವ ಸಹಜ ಹಕ್ಕುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ತಾಲೂಕ ಮುಖ್ಯ ವ್ಶೆದ್ಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಹುಟ್ಟಿದ ಪ್ರತಿಯೊಂದು ಮಗುವಿಗೂ ಉತ್ತಮ ಆರೋಗ್ಯ ದೊರೆಯುವಂತಾಗಬೇಕು, ಶಿಕ್ಷಣ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತಾಗಬೇಕಾದರೆ ಜನಸಂಖ್ಯೆ ಕುರಿತಂತೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡುವ ದೃಷ್ಠಿಯಿಂದ ಈ ದಿನ ಮಹತ್ವಪೂರ್ಣವಾಗಿದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕಿ ಜಯಶ್ರೀ ಆಲೂರ ಮಾತನಾಡಿ, ಭಾರತ ಬಡವರಿಂದ ಕೂಡಿದ ಶ್ರೀಮಂತ ರಾಷ್ಟ್ರವಾಗಿದ್ದು ಇಲ್ಲಿ ದುಡಿಯುವ ಕೈಗಳಿಗಿಂತ ಖಾಲಿ ಕೈಗಳೇ ಹೆಚ್ಚಾಗಿದ್ದು ಜನಸಂಖ್ಯಾ ಸ್ಪೋಟದಿಂದ ಭಾರತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ, 1989ರಲ್ಲಿ ಪ್ರಾರಂಭಗೊಂಡ ಈ ಜನಸಂಖ್ಯಾ ದಿನವನ್ನು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದು ಇದರ ನಿಮಿತ್ತ ಸಮಾಜದಲ್ಲಿ ಜನಗಾಗೃತಿ ಮೂಡಿಸುವ ಕೆಲಸ ನಡೆದಿದೆ. ಇಂದು ಭಾರತ ವಿಶ್ವದಲ್ಲಿಯೇ 135 ಕೋಟಿ ಜನಸಂಖ್ಯೆ ಹೊಂದುವುದರ ಮೂಲಕ ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ಮಾನವ ಸಂಪನ್ಮೂಲ ಬೆಳವಣಿಗೆ ದೇಶದ ಬೆಳವಣಿಗೆಗೆ ಪೂರಕವಾಗಬೇಕು ಜನಸಂಖ್ಯಾ ಸ್ಪೋಟದಿಂದ ಬಡತನ, ಅನಕ್ಷರತೆ, ಉದ್ಯೋಗದ ಅಭಾವ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಹುಟ್ಟಿ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ರಾಮವ್ವ ಪೂಜಾರ, ರೆಹಮಾನ ಕೆರಕಲಮಟ್ಟಿ, ಪಶುಪತಿ, ಡಾ,ಜ್ಯೋತಿ, ಹಿರಿಯ ಆರೋಗ್ಯ ಸಹಾಯಕ ಪಿ.ಎಚ್.ಮಹಾಲಿಂಗಪುರ, ಜಿ.ವಿ. ಜೋಶಿ, ದತ್ತಾತ್ರೇಯ ಅರವಟಗಿ, ಆರ್.ಎ. ಕುರಹಟ್ಟಿ, ನಾರಾಯಣ, ರವಿ ಹೊತ್ತಗಿಗೌಡರ, ಮನು ಬಿರಾದಾರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.