ಮಿಟ್ಟಿಮಲ್ಕಾಪೂರು : ಆಡಳಿತಾಧಿಕಾರಿ, ಪಿಡಿಓ, ಕಂಪ್ಯೂಟರ್ ಅಪರೇಟರ್ ಅವ್ಯವಹಾರ ಪ್ರಕರಣ

ರಾಯಚೂರು.ಏ.೨೨- ತಾಲೂಕಿನ ಮಿಟ್ಟಿಮಲ್ಕಾಪೂರು ಗ್ರಾ.ಪಂ.ನಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಪಿಡಿಓ ಮತ್ತು ಕಂಪ್ಯೂಟರ್ ಅಪರೇಟರ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಗ್ರಾಮ ಪಂಚಾಯತಿ ಸದಸ್ಯರಾದ ಖಾಜಾ ಹುಸೇನ್ ಅವರು ಒತ್ತಾಯಿಸಿದ್ದಾರೆ.
೧೫ ನೇ ಹಣಕಾಸಿನ ಯೋಜನೆಯಡಿ ೫೦ ಲಕ್ಷ ರೂ. ಹಣ ಯಾವುದೇ ಕಡತಗಳನ್ನು ನಿರ್ವಹಿಸದೇ, ಲೂಟಿ ಮಾಡಲಾಗಿದೆಂದು ಆರೋಪಿಸಿದ್ದಾರೆ. ಈ ಅವ್ಯವಹಾರದಲ್ಲಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಪಿಡಿಓ ಸರೋಜಾ ಮತ್ತು ಕಂಪ್ಯೂಟರ್ ಅಪರೇಟರ್ ಭೀಮರೆಡ್ಡಿ ಅವರು ನೇರವಾಗಿ ಶಾಮೀಲಾಗಿದ್ದಾರೆಂದು ಆರೋಪಿಸಿ, ತನಿಖೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
೩ ಫೆಬ್ರವರಿ ೨೦೨೧ ರಲ್ಲಿ ಈ ಅವ್ಯವಹಾರ ನಡೆದಿದೆ.
೧೫ ನೇ ಹಣಕಾಸು ಯೋಜನೆ ಬಗ್ಗೆ ಮಾಹಿತಿ ಕೇಳಿದರೇ, ಯಾರು ನೀಡುತ್ತಿಲ್ಲ. ಇದು ಮೇಲ್ನೋಟಕ್ಕೆ ಅವ್ಯವಹಾರವನ್ನು ಸಾಬೀತು ಪಡಿಸುತ್ತದೆ. ಪಿಡಿಓ ಸರೋಜಾ, ಭೀಮರೆಡ್ಡಿ ಇವರುಗಳು ಪಂಚಾಯತ ರಾಜ್ ಸಚಿವರಾದ ಈಶ್ವರಪ್ಪ ಅವರ ಹೆಸರು ಹೇಳಿಕೊಳ್ಳುತ್ತಿದ್ದಾರೆ. ಭೀಮರೆಡ್ಡಿ ತನ್ನ ಹುದ್ದೆ ನಿರ್ವಹಿಸದೇ ಕಾರುನಲ್ಲಿ ಓಡಾಡಿಕೊಂಡಿದ್ದಾನೆ. ಗಾಣದಾಳ, ಗಿಲ್ಲೇಸೂಗೂರು, ಮಿಟ್ಟಿಮಲ್ಕಾಪೂರು ಗ್ರಾ.ಪಂ.ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮಿಟ್ಟಿಮಲ್ಕಾಪೂರು ಗ್ರಾಮದಲ್ಲಿ ಭೀಮರೆಡ್ಡಿ ಅವರು ಗಿಲ್ಲೇಸೂಗೂರು, ಗಾಣದಾಳ ಗ್ರಾಮಗಳ ಫಲಾನುಭವಿಗಳ ಜಾಬ್ ಕಾರ್ಡ್ ಮಿಟ್ಟಿಮಲ್ಕಾಪೂರು ಗ್ರಾ.ಪಂ. ಪಂಚತಂತ್ರ ಜಾಲತಾಣದಲ್ಲಿ ಸೃಷ್ಟಿಸಿ, ನರೇಗಾ ಯೋಜನೆ ಕೂಲಿ ತಮಗೆ ಬೇಕಾದ ಖಾತೆಗಳಿಗೆ ಜಮಾ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಸರೋಜಾ ಅವರು ಚಿಕ್ಕಸೂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕುಡಿವ ನೀರಿನ ಕಾಮಗಾರಿ, ಚರಂಡಿ, ಬೀದಿ ದೀಪ ಇನ್ನೂ ಮುಂತಾದ ಅವಶ್ಯಕ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.