ಮಿಗ್ ವಿಮಾನ ಪತನ ಮೂವರ ಸಾವು

ನವದೆಹಲಿ,ಮೇ ೮- ರಾಜಸ್ಥಾನದ ಹಳ್ಳಿಯೊಂದರ ಬಳಿ ಇಂದು ಬೆಳಿಗ್ಗೆ ಮಿಗ್ ವಿಮಾನ ಪತನಗೊಂಡು ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟು,ಮೂವರು ಗಾಯಗೊಂಡರೆ, ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಭಾರತೀಯ ವಾಯುಪಡೆಗೆ ಸೇರಿದ ಮಿಗ್ ೨೧ ಫೈಟರ್ ಜೆಟ್ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು,ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಗಾಯಗೊಂಡಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಅದೃಷ್ಟವಶಾತ್, ವಿಮಾನದ ಪೈಲಟ್ ಸಣ್ಣ ಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ವಿಮಾನವು ಸೂರತ್‌ಗಢ ಏರ್ ಫೋರ್ಸ್ ಸ್ಟೇಷನ್‌ನಿಂದ ಟೇಕಾಫ್ ಆಗಿದ್ದು, ಟೇಕ್ ಆಫ್ ಆದ ಕೂಡಲೇ ಪೈಲಟ್ ತಾಂತ್ರಿಕ ದೋಷವನ್ನು ವರದಿ ಮಾಡಿದ್ದಾರೆ.
ವರದಿಯ ಪ್ರಕಾರ, ಮಿಗ್ -೨೧ ಬಹ್ಲೋಲ್‌ನಲ್ಲಿರುವ ಮನೆಗೆ ಅಪ್ಪಳಿಸಿದ ನಂತರ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ರಾಜಸ್ಥಾನದ ಹಳ್ಳಿಯಲ್ಲಿ ಮಿಗ್-೨೧ ಪತನಗೊಳ್ಳುತ್ತಿದ್ದಂತೆ ಯುದ್ಧ ವಿಮಾನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮನೆಯ ಬಳಿ ಬೆಂಕಿ ಹೊತ್ತಿಕೊಂಡಿದೆ. ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ಹಾರಿಸಲು ಹರಸಾಹಸ ಪಟ್ಟಿದ್ದಾರೆ.
ಮಿಗ್-೨೧ ಯುದ್ಧ ವಿಮಾನದ ಪತನದಿಂದಾಗಿ ಮನೆಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಭಾರತೀಯ ವಾಯುಪಡೆ ಈ ದುರ್ಘಟನೆಯ ಕುರಿತು ತನಿಖೆ ನಡೆಸಲು ಮುಂದಾಗಿದೆ.
ಪೈಲಟ್ ಸುರಕ್ಷಿತವಾಗಿ ಹೊರಗೆ ಬಂದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಕಾರಣವನ್ನು ಪತ್ತೆಹಚ್ಚಲು ತನಿಖೆಯನ್ನು ರಚಿಸಲಾಗಿದೆ” ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಇಬ್ಬರು ಪೈಲಟ್‌ಗಳು ಮತ್ತು ತಂತ್ರಜ್ಞರಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಆ ವೇಳೆ ಮೂವರು ಗಾಯಗೊಂಡಿದ್ದು, ಭಾರತೀಯ ಸೇನೆಯ ಪ್ರಕಾರ ಗಾಯಗೊಂಡ ಎಲ್ಲಾ ಮೂವರು ಸಿಬ್ಬಂದಿಯನ್ನು ಉಧಂಪುರದ ಕಮಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕಳೆದ ವರ್ಷ, ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ೨ ಸೀಟ್‌ನ ಮಿಗ್ -೨೧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ರಾಜಸ್ಥಾನದ ಉತರ್ಲೈ ವಾಯುನೆಲೆಯಿಂದ ತರಬೇತಿಗಾಗಿ ವಿಮಾನವು ಹಾರಾಟ ನಡೆಸುತ್ತಿದ್ದ ವೇಳೆ ಅವಘಡ ನಡೆದಿತ್ತು. ರಾತ್ರಿ ೯:೧೦ ರ ಸುಮಾರಿಗೆ ಬಾರ್ಮರ್ ಬಳಿ ವಿಮಾನ ಅಪಘಾತಕ್ಕೀಡಾಗಿತ್ತು. ಇಬ್ಬರೂ ಪೈಲಟ್‌ಗಳು ಗಾಯಗೊಂಡ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.