ಮಿಂಚಿನ ದಾಳಿ ನಡೆಸಿ 1 ಲಕ್ಷ ರೂ. ಮೌಲ್ಯದ ಸ್ವದೇಶಿ ಮದ್ಯ ಜಪ್ತಿ

ಕಲಬುರಗಿ,ನ.29:ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ 1 ಲಕ್ಷ ರೂ. ಮೌಲ್ಯದ ಸ್ವದೇಶಿ ಮದ್ಯ ಹಾಗೂ 2 ದ್ವಿಚಕ್ರವಾಹನವನ್ನು ಜಪ್ತಿಪಡಿಸಲಾಗಿದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಶರಣಪ್ಪ ಇವರು ಸಿಬ್ಬಂದಿಗಳೊಂದಿಗೆ 2021ರ ನವೆಂಬರ್ 27 ರಂದು ಕಲಬುರಗಿ ವಲಯ ವ್ಯಾಪ್ತಿಯ ಹಡಗಲಿ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಅಬಕಾರಿ ದಾಳಿ ನಡೆಸಿ 10.440 ಲೀಟರ್ ಸ್ವದೇಶಿ ಮದ್ಯ ಸಾಗಾಟ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿಪಡಿಸಿಕೊಂಡು ಆರೋಪಿ ಅನೀಲ ತಂದೆ ಬಾಲಯ್ಯ ಇವರ ವಿರುದ್ಧ ಘೋರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಲಾಗಿದೆ.
ಆಳಂದ ತಾಲೂಕಿನ ಕೋತನಹಿಪ್ಪರಗಾ ಗ್ರಾಮದ ಕಿರಣಾ ಅಂಗಡಿಯ ಮೇಲೆ ಅಬಕಾರಿ ದಾಳಿ ನಡೆಸಿ ಅಕ್ರಮವಾಗಿ ಮಹಾರಾಷ್ಟ್ರ ರಾಜ್ಯದ 2.700 ಲೀಟರ್ ಮದ್ಯ ಮತ್ತು 8.640 ಲೀಟರ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ ಆರೋಪಿ ಬಾಲಾಜಿ ತಂದೆ ಕಮಲಾಕರ ಪೂಜಾರಿ ಇವರ ವಿರುದ್ಧ ಆಳಂದ ಅಬಕಾರಿ ಉಪ ನಿರೀಕ್ಷಕ ಬಸವರಾಜ ಮಾಲಗತ್ತಿ ಇವರು ಘೋರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಂಡಿದ್ದಾರೆ.
ಚಿಂಚೋಳಿ ತಾಲೂಕಿನಲ್ಲಿ ಪ್ರತ್ಯೇಕವಾಗಿ ಎರಡು ಕಡೆ ಅಬಕಾರಿ ದಾಳಿ ನಡೆಸಿ ಅಕ್ರಮವಾಗಿ 17.280 ಲೀಟರ್ ಮದ್ಯ ಮತ್ತು 7.800 ಲೀಟರ್ ಬಿಯರ್‍ನ್ನು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಜಪ್ತಿಪಡಿಸಿಕೊಂಡು ಇಬ್ಬರು ಆರೋಪಿಗಳ ವಿರುದ್ಧ ಚಿಂಚೋಳಿ ವಲಯದ ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಉಪ ನಿರೀಕ್ಷಕರು ಘೋರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ರಾದ ಶಶಿಕಲಾ ಎಸ್. ಒಡೆಯರ್ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತರ ಆದೇಶದನ್ವಯ ಈ ಮಿಂಚಿನ ದಾಳಿಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.