ಮಿಂಚಿದ ಶೆಫಾಲಿ-ಲ್ಯಾನಿಂಗ್‌: ಆರ್‌ಸಿಬಿಗೆ ಆರಂಭಿಕಾಘಾತ

ಮುಂಬೈ, ಮಾ.೬- ಶೆಫಾಲಿ ವರ್ಮಾ ಹಾಗೂ ಮೆಗ್‌ ಲ್ಯಾನಿಂಗ್ ಪ್ರದರ್ಶಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಇಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ವಿರುದ್ಧದ ಡಬ್ಲ್ಯುಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ೬೦ ರನ್‌ಗಳ ಜಯ ಸಾಧಿಸಿ, ಶುಭಾರಂಭ ಮಾಡಿದೆ. ಅತ್ತ ಆರ್‌ಸಿಬಿ ಪರ ಘಟಾನುಘಟಿ ಬ್ಯಾಟರ್ಸ್‌ಗಳ ವೈಫಲ್ಯ ತಂಡಕ್ಕೆ ದುಬಾರಿಯಾಯಿತು.
ಮೊದಲು ಬ್ಯಾಟಿಂಗ್‌ ನಡೆಸಿದ ಡಿಸಿ ಆರಂಭಿಕರಾದ ಲ್ಯಾನಿಂಗ್‌ (೭೨) ಹಾಗೂ ಶೆಫಾಲಿ (೮೪) ಸ್ಫೋಟಕ ಆರಂಭವನ್ನೇ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ೧೪.೩ ಓವರ್‌ಗಳಲ್ಲಿ ೧೬೨ ರನ್‌ಗಳ ಜೊತೆಯಾಟ ನಡೆಸಿತು. ಈ ಅವಧಿಯಲ್ಲಿ ಇಬ್ಬರೂ ಬ್ಯಾಟರ್‌ಗಳು ಆರ್‌ಸಿಬಿ ಬೌಲರ್ಸ್‌ಗಳ ಬೆವರಿಳಿಸಿದರು. ಬೌಲರ್‌ಗಳ ಎಲ್ಲಾ ರಣತಂತ್ರಗಳನ್ನು ಬುಡಮೇಲುಗೊಳಿಸಿದ ಈ ಜೋಡಿ ಸಿಕ್ಸರ್‌-ಬೌಂಡರಿಗಳ ಮೂಲಕ ರನ್‌ ಗಳಿಸುತ್ತಾ ಸಾಗಿತು. ಶೆಫಾಲಿ ತನ್ನ ಇನ್ನಿಂಗ್ಸ್‌ನಲ್ಲಿ ಹತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ ಸಿಡಿಸಿದ್ದರೆ ಲ್ಯಾನಿಂಗ್‌ ೧೪ ಬೌಂಡರಿ ದಾಖಲಿಸಿದರು. ಅಲ್ಲದೆ ಅಂತಿಮ ಹಂತದಲ್ಲಿ ಕಾಪ್‌ ಹಾಗೂ ರಾಡ್ರಿಗಸ್‌ ಅಜೇಯ, ವೇಗದ ಬ್ಯಾಟಿಂಗ್‌ ಪ್ರದರ್ಶಿಸಿದ ಪರಿಣಾಮ ತಂಡ ಇನ್ನೂರರ ಗಡಿ ದಾಟಿತು. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ ೨೨೩ ರನ್‌ಗಳ ಬೃಹತ್‌ ಮೊತ್ತವನ್ನೇ ಪೇರಿಸಿತು. ಆರ್‌ಸಿಬಿ ಪರ ಹೇದರ್‌ ನೈಟ್‌ ಎರಡು ವಿಕೆಟ್‌ ಪಡೆದರು.
ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿಗೆ ನಾಯಕಿ ಸ್ಮೃತಿ ಮಂಧಾನ (೩೫) ಉತ್ತಮ ಆರಂಭ ನೀಡಿದರೂ ಡಿವೈನ್‌ (೧೪), ಕಸಾಟ್‌ (೯), ರಿಚಾ ಘೋಷ್‌ (೨) ವಿಫಲತೆ ಕಂಡರು. ಆದರೆ ಎಲಿಸ್ಸಾ ಪೆರ್ರಿ (೩೧) ಹಾಗೂ ಹೇದರ್‌ ನೈಟ್‌ (೩೪) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಮೆಘನ್‌ ಶಟ್‌ (ಅಜೇಯ ೩೦) ವೇಗದ ಆಟ ಪ್ರದರ್ಶಿಸಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ ೧೬೩ ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಡಿಸಿ ಪರ ತಾರಾ ನೋರ್ರಿಸ್‌ ಐದು ವಿಕೆಟ್‌ ಪಡೆದರು.