ಮಿಂಚಿದ ಬ್ರೀಲ್: ಸ್ವಿಸ್ ಪಡೆಗೆ ಜಯ

ದೋಹಾ (ಕತಾರ್), ನ.೨೪- ಬ್ರೀಲ್ ಎಂಬೊಲೋ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಇಲ್ಲಿ ಕ್ಯಾಮರೊನ್ ವಿರುದ್ಧದ ಪಂದ್ಯವನ್ನು ಸ್ವಿಟ್ಝರ್‌ಲ್ಯಾಂಡ್ ೧-೦ ಅಂತರದಲ್ಲಿ ಗೆದ್ದುಕೊಂಡು ಜಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಜನೌಬ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಆರಂಭದಲ್ಲೇ ಸಮಬಲದ ಹೋರಾಟ ಪ್ರದರ್ಶಿಸಿದವು. ಅದರಲ್ಲೂ ಟಾರ್ಗೆಟ್ ಮೇಲಿನ ದಾಳಿಯಲ್ಲಿ ಕ್ಯಾಮರೊನ್ ಕೊಂಚ ಮೇಲುಗೈ ಹೊಂದಿತ್ತು. ಆದರೂ ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಕೂಡ ಗೋಲು ದಾಖಲಿಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲಾರ್ಧದಲ್ಲಿ ೦-೦ ಅಂತರದಲ್ಲೇ ಅಂತ್ಯಗೊಂಡಿತ್ತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಸ್ವಿಟ್ಝರ್‌ಲ್ಯಾಂಡ್ ತನ್ನ ಹೋರಾಟಕ್ಕೆ ಚುರುಕು ನೀಡಿತು. ಪರಿಣಾಮ ಪಂದ್ಯದ ೪೮ನೇ ನಿಮಿಷದಲ್ಲಿ ಬ್ರೀಲ್ ಎಂಬೊಲೋ ಆಕರ್ಷಕ ಗೋಲಿನ ಮೂಲಕ ಸ್ವಿಟ್ಝರ್‌ಲ್ಯಾಂಡ್‌ಗೆ ಪಂದ್ಯದಲ್ಲಿ ಮುನ್ನಡೆ ತಂದುಕೊಟ್ಟರು. ಆದರೆ ಬಳಿಕ ಎರಡೂ ತಂಡಗಳು ಗೋಲಿಗಾಗಿ ತೀವ್ರ ಹರಸಾಹಸ ಪಟ್ಟರೂ ಗೋಲು ದಾಖಲಾಗಲಿಲ್ಲ. ಈ ಅವಧಿಯಲ್ಲಿ ಇತ್ತಂಡಗಳಿಗೂ ಗೋಲು ಗಳಿಸುವ ಹಲವು ಅವಕಾಶಗಳು ಲಭಿಸಿದರೂ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಲಿಲ್ಲ. ಅಂತಿಮವಾಗಿ ಇದೇ ೧-೦ ಅಂತರದಲ್ಲಿ ಪಂದ್ಯವನ್ನು ಸ್ವಿಟ್ಝರ್‌ಲ್ಯಾಂಡ್ ಗೆದ್ದುಕೊಂಡು, ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ ಕ್ಯಾಮರೋನ್ ಅಂತಿಮ ಸ್ಥಾನಕ್ಕೆ ಹಿಂಭಡ್ತಿ ಪಡೆಯಿತು.