ಮಾ.8ರಿಂದ ಶ್ರೀ ಶರಣಬಸವೇಶ್ವರ ಜಾತ್ರೆ ಆರಂಭಮಾ.12ರಂದು ರಥೋತ್ಸವ, ಆಕರ್ಷಕ ಶರಣಾರತಿ

ಕಲಬುರಗಿ;ಮಾ.5: ಆರು ದಿನಗಳ ಕಾಲ ನಡೆಯುವ 201ನೇ ಐತಿಹಾಸಿಕ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಗರದಲ್ಲಿ ಇದೇ ಮಾರ್ಚ್ 8ರಿಂದ ಆರಂಭವಾಗಲಿದ್ದು, ಮಾ.12ರಂದು ರಥೋತ್ಸವ ನೆರವೇರಲಿದೆ.

ಶ್ರೀ ಶರಣ ಬಸವೇಶ್ವರ ಸಂಸ್ಥಾನದ ದಾಸೋಹ ಮಹಾ ಮನೆಯಲ್ಲಿ
ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಪೂರ್ಣ ವಿವರ ನೀಡಿದರು.

ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಭಕ್ತರಿಂದ ಪಾದಪೂಜೆ ಸ್ವೀಕರಿಸಲು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು, ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಲಿದೆ ಎಂದು ಹೇಳಿದರು.
ಈ ಹಿಂದಿನಂತೆ ಆಚರಣೆಗಳು ಪ್ರತಿದಿನ ಸಂಜೆ ಧಾರ್ಮಿಕ ಪ್ರವಚನಗಳಿಗೆ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಐದನೇ ದಿನದ ರಥೋತ್ಸವದ ನಂತರ ಆರನೇ ದಿನ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಕಲಾ ಬಳಗದ ಸದಸ್ಯರಿಂದ ಮಹಾದಾಸೋಹಿ ಶರಣಬಸವೇಶ್ವರರ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ರಮೇಶ್ ಬಂಧು ಅವರು ನಿರ್ಮಿಸಿರುವ ನಾಟಕವನ್ನು ಬಸವರಾಜ ಕೊಂಚಗಲ್ ಬರೆದು ನಿರ್ದೇಶಿಸಿದ್ದಾರೆ.
ಪೂಜ್ಯ ಡಾ. ಅಪ್ಪಾಜಿ ಮತ್ತು ಮಾತೋಶ್ರೀ ಡಾ. ಅವ್ವಾಜಿ ಮಾತನಾಡಿ, ಜಗನ್ನಾಥ ಡಿಗ್ಗಿ ದಂಪತಿಗಳ ಸಾಮಾಜಿಕ-ಧಾರ್ಮಿಕ ಸೇವೆಯನ್ನು ಗುರುತಿಸಿ 50 ಸಾವಿರ ರೂ. ನಗದು, ಪ್ರಶಸ್ತಿಪತ್ರ, ಫಲಕ, ಶಾಲು ಒಳಗೊಂಡ “ದಾಸೋಹ ಜ್ಞಾನರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನುಡಿದರು.

ಉದ್ಘಾಟನಾ ದಿನದಂದು ಬೆಳಗುಂಪಿಯ ಸಂಸ್ಥಾನ ಬೃಹನ್ಮಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಮಹಾದಾಸೋಹಿ ಶರಣಬಸವೇಶ್ವರರ ಲೀಲೆಗಳು ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದರು.

ಎರಡನೇ ದಿನ ಬಸವಕಲ್ಯಾಣದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ವಿರಕ್ತಮಠ ಬೀಳಗಿಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಶಿವಾನುಭವ ಚಿಂತನೆ ಕುರಿತು ಮಾತನಾಡಲಿದ್ದಾರೆ. ನಂತರ ಮುಕ್ತಾಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದರು.

ಮೂರನೇ ದಿನ ಶರಣಬಸವೇಶ್ವರ ಸಂಸ್ಥಾನಕ್ಕೆ ಮಹಾದಾಸೋಹ ಪೀಠಾಧಿಪತಿಗಳ ಕೊಡುಗೆಗಳ ಕುರಿತು ಕಟ್ಟಿಮನಿ ಸಂಸ್ಥಾನ ಹಿರೇಮಠದ ಮುಗಳನಾಗವಿಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಜಗನ್ನಾಥ ಡಿಗ್ಗಿ ದಂಪತಿಗಳಿಗೆ “ದಾಸೋಹ ಜ್ಞಾನರತ್ನ” ಪ್ರಶಸ್ತಿ ಪ್ರದಾನ ಮಾಡುವರು. ನಂತರ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ನಾಲ್ಕನೇ ದಿನ ಅಫಜಲಪುರ ತಾಲೂಕಿನ ಚಿಣಮಗೇರಾ ಮಹಾಂತಪುರದ ವೀರಮಹಾಂತ ಶಿವಾಚಾರ್ಯರು, ಮಹಾದಾಸೋಹಿ ಶರಣಬಸವೇಶ್ವರ ಮಹಿಮೆಗಳು-ಶಿವಲೀಲೆಗಳು ಕುರಿತು ಮಾತನಾಡುವರು. ನಂತರ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಐದನೇ ದಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ರಥೋತ್ಸವ ನಡೆಯಲಿದ್ದು, ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಆರನೇ ದಿನ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ನಡೆಯಲಿದ್ದು, ಆಂಧ್ರಪ್ರದೇಶದ ಶ್ರೀಶೈಲದ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಚೌಡಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪೀಠದ 9ನೇ ಪೀಠಾಧಿಪತಿ
ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ, ಕುಲಸಚಿವ ಅನಿಲ್ ಕುಮಾರ್ ಬಿಡವೆ, ಸಮಕುಲಪತಿ ಬಿ.ಡಿ.ಮೈತ್ರಿ ಇದ್ದರು.


ವಾರಣಾಸಿ ಪುರೋಹಿತರಿಂದ ಶರಣಾರತಿ
18ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಅಂಗವಾಗಿ ಮಾರ್ಚ್ 12ರಂದು ರಥೋತ್ಸವ ಜರುಗಲಿದ್ದು, ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಾರಣಾಸಿಯ 12 ಪುರೋಹಿತರ ತಂಡವು ಗಂಗಾ ಆರತಿಯ ಮಾದರಿಯಲ್ಲಿ ಶರಣಾರತಿ ನೆರವೇರಿಸಲಿದ್ದಾರೆ. ಶರಣಾರತಿಯು ಕಣ್ಮನ ಸೆಳೆಯುವ ದೃಶ್ಯವಾಗಿದ್ದು, ವಿಶೇಷವಾಗಿ ನಿರ್ಮಿಸಿದ ಪೀಠದ ಮೇಲೆ ವಾರಣಾಸಿಯ ಪುರೋಹಿತರು ಆರತಿ ದೃಶ್ಯ ಜನರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಇದು 201ನೇ ಶರಣಬಸವೇಶ್ವರ ಜಾತ್ರೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಎಂದು ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ದಾಕ್ಷಾಯಿಣಿ ಅವ್ವಾಜಿ ಹೇಳಿದರು.