ಮಾ.5 ರಂದು ಬೀದರ್‍ನಲ್ಲಿ ರೇಣುಕಾಚಾರ್ಯರ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ: ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್,ಫೆ.26-ರಾಜ್ಯದ ಮುಕುಟಪ್ರಾಯ, ಗಡಿ ಜಿಲ್ಲೆ ಬೀದರ್‍ನಲ್ಲಿ ಮಾರ್ಚ್ 5 ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಯಂತಿ ಉತ್ಸವ ಸಮಿತಿ ಅಧ್ಯಕ್ಷರೂ ಆದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ನಗರದ ಗುಂಪಾ ರಸ್ತೆಯಲ್ಲಿರುವ ಬಸವ ಮುಕ್ತಿ ಮಂದಿರ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ರೇಣುಕರ ಘೋಷವಾಕ್ಯದಂತೆ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿಕೊಂಡು ಅಂದು ಅದ್ದೂರಿಯಾಗಿ ಜಯಂತಿ ಆಚರಿಸಲಾಗುವುದು. ನಗರದ ಗಾಂಧಿಗಂಜ್‍ನಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಿ ನಗರದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ , ಮಹಾವೀರ ಸರ್ಕಕ್, ಭಗತ್ ಸಿಂಗ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಹರಳಯ್ಯ ವೃತ್ತ ಮೋಹನ್ ಮಾರ್ಕೆಟ್ ಮಾರ್ಗವಾಗಿ ರೋಟರಿ ಹಾಗೂ ಕನ್ನಡಾಂಭೆ ವೃತ್ತದ ಮೂಲಕ ಹಾದು ಮೆರವಣಿಗೆ ರಂಗಮಂದಿರ ತಲುಪುವುದು. ನಂತರ ಅಲ್ಲಿ ಸರ್ಕಾರಿ ಕಾರ್ಯಕ್ರಮ ಜರುಗುವುದು ಈ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದವರನ್ನು ಸೇರಿಸಿ ಅನೇಕ ಸಮಿತಿಗಳನ್ನು ರಚಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರೇಣುಕಾದಿ ಪಂಚಾಚಾರ್ಯರು ಮಾನವ ಕುಲಕೋಟಿಯನ್ನು ಉದ್ಧರಿಸಲು ಮುಂದೆ ಅಗಸ್ಥ ಮುನಿಗೆ ಲಿಂಗದೀಕ್ಷೆ ಎಲ್ಲ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದರು. ರೇಣುಕಾಚಾರ್ಯರು ಇಡೀ ಮಾನವ ಸಮಾಜವನ್ನ ಎತ್ತಿ ಹಿಡಿದು ವರ್ಣಬೇಧ, ಜಾತಿ ರಹಿತ ಸಮಾಜವನ್ನು ಕಟ್ಟಿದರು. ಗುರುವಿನ ಗುಲಾಮನಾದರೆ ದೊರೆಯುವುದೆನ್ನ ಮುಕ್ತಿ ಎನ್ನುವಂತೆ ಈ ಜಗತ್ತಿನ ಎಲ್ಲ ಜನಮಾನಸಕ್ಕೆ ಗುರುಕಾರುಣ್ಯ ಅಗತ್ಯವಿದ್ದು, ಅದು ಸಂಸ್ಕಾರಯುತ ಬದುಕಿಗೆ ದಾರಿ ಮಾಡಿಕೊಡಲಿದೆ ಎಂದರು.
ಗಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಗಂಗಾಧರ ಶಿವಾಚಾರ್ಯರು, ಭೀಮಳಖೇಡ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಸಮಾಸಭೆ ಜಿಲ್ಲಾಧ್ಯಕ್ಷ ವೈಜನಾಥ ಕಮಠಾಣೆ, ಕಲ್ಯಾಣ ಕರ್ನಾಟಕ ಜಂಗಮ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಪ್ರಮುಖರಾದ ಓಂಪ್ರಕಾಶ ರೊಟ್ಟೆ, ರೇವಣಸಿದ್ದಯ್ಯ ಸ್ವಾಮಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.