ಮಾ.5 ರಂದು ಜನಸ್ಪಂದನ ಕಾರ್ಯಕ್ರಮ

ಕಲಬುರಗಿ,ಮಾ.3: ಈವರೆಗೆ ಮೂರು ಬಾರಿ ವಿವಿಧ ಕಾರಣಗಳಿಗಾಗಿ ಮುಂದೂಡಲ್ಪಟ್ಡಿದ್ದ ಜನ ಸ್ಪಂದನ ಕಾರ್ಯಕ್ರಮ ಇದೇ ಮಾ.5ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳು ಹಾಗೂ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಿದ್ದಾರೆ ಎಂದರು.
ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು.
ಕಂದಾಯ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಆ ದಿನ ಪ್ರತ್ಯೇಕ ಕೌಂಟರ್ ತೆರೆಯಲಿವೆ. ಜನರು ತಮ್ಮ ಅಹವಾಲು ಅರ್ಜಿಗಳನ್ನು ಆಯಾ ಇಲಾಖೆಯ ಕೌಂಟರ್ ನಲ್ಲಿ ಸಲ್ಲಿಸಿದ ಬಳಿಕ ಉಸ್ತುವಾರಿ ಸಚಿವರು ಎಲ್ಲ ಇಲಾಖೆಗಳಿಗೆ ಬಂದಿರುವ ಅರ್ಜಿಗಳ ಪರಿಶೀಲನೆ ಕೈಗೊಂಡು ಪರಿಹಾರ ಒದಗಿಸಲಿದ್ದಾರೆ ಎಂದರು.
ಇನ್ನು, ಇದೇ ಮಾ.8ರಂದು ಸಾರಿಗೆ ಸಚಿವ ರಾಮಲಿಂಗಾತರೆಡ್ಡಿ ಅವರು ಕಲಬುರಗಿ ನಗರದಲ್ಲಿ ಕೆ.ಕೆ.ಆರ್.ಟಿ.ಸಿ ವಿಭಾಗದಲ್ಲಿ ಹೊಸದಾಗಿ ನೇಮಕಾತಿ ಪಡೆದಿರುವ 1300 ಸಿಬ್ಬಂದಿಗೆ ಕೆಲಸದ ಆದೇಶ ಪತ್ರಗಳನ್ನು ನೀಡಲಿದ್ದಾರೆ ಎಂದು ಸಹ ಅಲ್ಲಮಪ್ರಭು ಮಾಹಿತಿ ನೀಡಿದರು.
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಚಟುವಟಿಕೆಗೆ ಪೂರಕವಾಗಿ ನಗರದ ಸುತ್ತಲೂ ನಾಲ್ಕು ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾವನೆಯಿದೆ. ಈ ಕುರಿತು ಉಸ್ತುವಾರಿ ಸಚಿವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವರನ್ನು ಅಂದು ಒತ್ತಾಯಿಸಲಾಗುವುದು ಎಂದು ನುಡಿದರು.ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್ ಇದ್ದರು.