ಮಾ.31 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ28. ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷಾ ಅಂಗವಾಗಿ, ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆ ನಡೆಸಲಾಯಿತು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಅಧಿಕಾರಿ ಕೆ.ವೀರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಶಿಕ್ಷರಾದ ಮೊಹಮ್ಮದ್‍ಖಾಸಿಂ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕರಾದ ಪಿ.ವೆಂಕಟೇಶ್ ಮಾತನಾಡಿ ಪರೀಕ್ಷೆ ಕೊಠಡಿಗಳ ಪರೀಕ್ಷೆಯ ನಿಯಮಾವಳಿಗಳನ್ನು ತಿಳಿಸಿ, ಪರೀಕ್ಷೆಗಳು ಮಾ.31 ರಿಂದ ಪ್ರಾರಂಭಗೊಂಡು ಏ.15ಕ್ಕೆ ಮುಗಿಯಲಿದೆ. ವೇಳಾಪಟ್ಟಿಯಂತೆ ಬೆಳಿಗ್ಗೆ 10-30 ರಿಂದ 2 ಗಂಟೆವರೆಗೆ ನಡೆಯಲಿದ್ದು, ಇಂಗ್ಲೀಷ್, ಹಿಂದಿ ವಿಷಯಗಳ ದಿನ ಮದ್ಯಾಹ್ನ 1-30ರವರೆಗೆ ಇರುತ್ತದೆ. ಮೇಲ್ವಿಚಾರಕರು ಕೊಠಡಿಗಳಲ್ಲಿ ಮೊಬೈಲ್ ಬಳಸವಂತಿಲ್ಲ. ಅದೇರೀತಿ ವಿದ್ಯಾರ್ಥಿಗಳ ಮೊಬೈಲ್‍ಗಳನ್ನು ಸುಪರ್ಧಿಗೆ ತೆಗೆದುಕೊಳ್ಳಬೇಕು. ನಮ್ಮ ಕೇಂದ್ರದಲ್ಲಿ 195 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 9 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಚೀಟಿ ಎತ್ತುವ ಮೂಲಕ ನಿಮ್ಮ ಕೊಠಡಿಗಳ ಆಯ್ಕೆ ನಡೆಯಲಿದೆ. ವಿದ್ಯಾರ್ಥಿಗಳ ಹಾಲ್‍ಟಿಕೆಟ್ ಮತ್ತು ವಿದ್ಯಾರ್ಥಿಯನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಸಹಿಗಳನ್ನು ಸೂಕ್ತ ಫಾರಂಗಳಲ್ಲಿ ನಿಗದಿತವಾಗಿ ಮಾಡಬೇಕು. ಬೆಂಗಳೂರು ಬೋರ್ಡಿಗೆ ಕಳುಹಿಸುವ ನಾಮಿನಲ್ ರೋಲ್‍ಗಳನ್ನು ಸರಿಯಾಗಿ ನಿಭಾಯಿಸಬೇಕೆಂದು ತಿಳಿಸಿದರು.
     ನಂತರ ಮೊಬೈಲ್ ಸ್ವಾಧೀನಾಧಿಕಾರಿ ಅರುಣಕುಮಾರ್ ಮಾತನಾಡಿ ಪರೀಕ್ಷಾ ನಿಯಮಗಳನ್ನು ತಿಳಿಸಿದರು. ಕೊನೆಯಲ್ಲಿ ಮುಖ್ಯ ಅಧೀಕ್ಷಕ ಅಧಿಕಾರಿ ಕೆ.ವೀರಪ್ಪ ಮಾತನಾಡಿ ಪರೀಕ್ಷಾ ಪ್ರಕ್ರಿಯೆಗಳು ಅಚ್ಚುಕಟ್ಟಾಗಿ ನಡೆಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ನೀವು ಮುಖ್ಯವಾಗಿ ಸಮಪಯ ಪರಿಪಾಲನೆ ಮಾಡಿ 10 ನಿಮಿಷ ಮುಂಚಿತವಾಗಿ ಇದ್ದು ನಿಯಮಗಳನ್ನು ನಿರ್ವಹಿಸಿ. ರಿಪೀಟರ್ಸ್ ಮತ್ತು ರೆಗುಲರ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಮತ್ತು ಪ್ರತ್ಯೇಕ ಪ್ರಶ್ನೆಪತ್ರಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಪೂರ್ವ ತಯಾರಯಿಂದ ಪರೀಕ್ಷೆ ನಿರ್ವಹಣೆ ಮಾಡಬೇಕೆಂದು, ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು. ಇದೇವೇಳೆ ಹಾಜರಿದ್ದ ಕೊಠಡಿ ಮೇಲ್ವಿಚಾರಕ ನಿಯೋಜಿತ ಶಿಕ್ಷಕರು ತಮ್ಮ ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡು ಸಲಹೆ ಪಡೆದುಕೊಂಡರು. ಶಾಲೆಯ ಸಹ ಶಿಕ್ಷಕರು, ಕೊಠಡಿ ಮೇಲ್ವಿಚಾರಕರಾಗಿ ನಿಯೋಜನೆಗೊಂಡ ಸಿರಿಗೇರಿ ಮತ್ತು ಎಂ.ಸೂಗೂರು ಮತ್ತು ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.