ಮಾ. 31 ರಂದು ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಕ್ರೀಡಾ ಉತ್ಸವವಿವಿಧ ತಾಲೂಕಿನಿಂದ 1600 ಕ್ರೀಡಾಪಟುಗಳು ಭಾಗಿ: ಅನಿಲ ಬೆಲ್ದಾರ್

ಬೀದರ:ಮಾ.2: ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ. ರೋಡ್ ಸೈಕ್ಲಿಂಗ್, ವಿಕಲಚೇತನರ ಮೋಟರ್ ಟ್ರ್ಯಾಕ್ ರೇಸ್, ವಾಲಿಬಾಲ್, ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡಾಕೂಟಗಳನ್ನು ಮಾರ್ಚ್ 31 ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಗೌರವಾಧ್ಯಕ್ಷ ಅನೀಲಕುಮಾರ ಬೆಲ್ದಾರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಅಂದು ಸೈಕ್ಲಿಂಗ್ ಕ್ರೀಡಾಕೂಟ ಅಂಬೇಡ್ಕರ್ ವೃತ್ತದಿಂದ ಪ್ರಾರಂಭ ಮಾಡಲಾಗುತ್ತಿದೆ. ಪುರುಷ ವಿಭಾಗಕ್ಕೆ 20 ಕಿ.ಮೀ. ಮಹಿಳಾ ವಿಭಾಗಕ್ಕೆ 30 ಕಿ.ಮೀ., ಬಾಲಕರ ವಿಭಾಗಕ್ಕೆ 30 ಕಿ.ಮೀ. ಬಾಲಕಿಯರ ವಿಭಾಗಕ್ಕೆ 20 ಕಿ.ಮೀ. ಸೈಕ್ಲಿಂಗ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಮರಳಿ ಅಂಬೇಡ್ಕರ್ ವೃತ್ತದಲ್ಲೇ ಮುಕ್ತಾಯಗೊಳ್ಳಲಿದೆ. ವಾಲಿಬಾಲ್ ಕ್ರೀಡೆಯನ್ನು ನೆಹರೂ ಕ್ರೀಡಾಂಗಣದಲ್ಲಿ ಹಾಗೂ ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡೆಯನ್ನು ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡೆಗೆ ಒಬ್ಬರಿಗೆ ನೊಂದಣಿ ಶುಲ್ಕ ರೂ. 500 ಭರಿಸಬೇಕಾಗುತ್ತದೆ. ಇನ್ನುಳಿದ ಕ್ರೀಡೆಗಳಲ್ಲಿ ತಲಾ ನೊಂದಣಿ ಶುಲ್ಕ ರೂ. 200 ಭರಿಸತಕ್ಕದ್ದು. ಜಿಲ್ಲೆಯ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬೆಲ್ದಾರ್ ತಿಳಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ 133ನೇ ಜಯಂತಿ ಕ್ರೀಡಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌಲಪ್ಪ ಎ.ಮಾಳಗೆ ಮಾತನಾಡಿ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಂದಾಜು 1600 ಕ್ರೀಡಾಪಟುಗಳು, ತರಬೇತಿದಾರರು ಹಾಗೂ ನಿರ್ಣಾಯಕರು ಹಾಗೂ ಪಾಲಕರು ಪೋಷಕರು ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ಮತ್ತು ಉತ್ತಮ ಗುಣಮಟ್ಟದ ಪ್ರಶಸ್ತಿ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ರಕ್ಷಣೆಗಾಗಿ ಅಂಬುಲೆನ್ಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನಾಂಕವಾಗಿರುತ್ತದೆ. ಕ್ರೀಡಾಪಟುಗಳು ತಮ್ಮ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ತಪ್ಪದೇ ನೀಡಬೇಕು. ಅರ್ಜಿಯನ್ನು ಡಿ.ಟ್ರ್ಯಾಕ್ ಸೈಕಲ್ ಸ್ಟೋರ್, ಶಿವನಗರ ರಸ್ತೆ, ಹಳೆಯ ಆದರ್ಶ ಕಾಲೋನಿ ರೈಲ್ವೆ ಗೇಟ್ ಹತ್ತಿರ ಸಲ್ಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಬಾಬುರಾವ ಪಾಸ್ವಾನ್, ಉಪಾಧ್ಯಕ್ಷ ಸೂರ್ಯಕಾಂತ ಮೋರೆ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರಧಾನ ಕಾರ್ಯದರ್ಶಿ ಮೌಲಪ್ಪ ಮಾಳಗೆ, ಕಾರ್ಯದರ್ಶಿ ಸಂದೀಪ ಕಾಂಟೆ, ಖಜಾಂಚಿ ಸುವಿತ್ ಮೋರೆ ಪ್ರಮುಖರಾದ ಗುಣವಂತ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.