ಮಾ.3 ಜಲ ಜಾಗೃತಿ ಪಾದಯಾತ್ರೆ

ಚಿಕ್ಕಬಳ್ಳಾಪುರ,ಮಾ.೨-ಬಯಲು ಸೀಮೆ ಜಿಲ್ಲೆಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ನೀರಿನ ಕೂಗು, ಯೋಜನೆಗಳ ನೈಜತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಾ.೩ರಿಂದ ಜಲ ಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ವೇದಿಕೆಯ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ವಿಚಾರದಲ್ಲಿ ಸರಕಾರಗಳು ಉದಾಸೀನ ಧೋರಣೆ ಅನುಸರಿದ್ದು, ಕುಡಿಯುವ ನೀರಿನ ವಿಚಾರವಾಗಿ ಹಣ ಲೂಟಿ ಮಾಡಿದ್ದೆ ಜನಪ್ರತಿನಿಧಿಗಳ ಸಾಧನೆಯಾಗಿದೆ. ಕುಡಿಯಲು ನೀರು ಕೇಳಿದಿಕ್ಕೆ ಉಪಯೋಗಿಸಲು ಯೋಗ್ಯವಲ್ಲದ ನೀರು ಕೊಟ್ಟಿದ್ದಾರೆ. ಇನ್ನಾದರು ಜನ ಜಾಗೃತಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆಗಳನ್ನು ಎದರುಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರರ ಪಾಲಿನ ಕಾರಳ ದಿನ:
೨೦೧೬ರಲ್ಲಿ ೧೬೦ಕ್ಕೂ ಹೆಚ್ಚು ದಿನ ನಡೆಸಿದ ಹೋರಾಟದ ನಂತರ, ೨೦೧೬ ಮಾ.೧೬ರಂದು ವಿಧಾನಸೌಧ ಮುತ್ತಿಗೆ ಎಂದು ಮೂರು ಜಿಲ್ಲೆಗಳಿಂದ ರೈತರು ಟ್ರಾಕ್ಟರ್‌ಗಳ ಮೂಲಕ ತೆರಳಿದರು, ಆ ಸಂದರ್ಭದಲ್ಲಿ ಸರಕಾರವು ಪೊಲೀಸರ ಮೂಲಕ ಎಲ್ಲಾ ರೈತರನ್ನು ಸರ್ಕಲ್‌ನಲ್ಲಿ ಜಮಾ ಮಾಡಿಸಿ ಲಾಠಿ ಚಾರ್ಜ್ ಮಾಡುವ ಮೂಲಕ ರಕ್ತ ಹರಿಸಿದರು. ಆದಿನ ಹೋರಾಟಗಾರರ ಪಾಲಿಗೆ ಕರಾಳದಿನವಾಗಿದ್ದು, ಅದನ್ನು ಮರೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾದಯಾತ್ರೆಯ ಮಾರ್ಗ:
ಮಾ.೩ರಿಂದ ಜಲ ಜಾಗೃತಿ ಪಾದಯಾತ್ರೆಯು ಗೌರಿಬಿನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಡಾ.ವಿ.ಎಸ್.ಪ್ರಕಾಶ್ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಮಾ.೪ಕ್ಕೆ ಮಂಚೇನಹಳ್ಳಿ, ಮಾ.೫ಕ್ಕೆ ದೊಡ್ಡಬಳ್ಳಾಪುರ, ಮಾ.೬ಕ್ಕೆ ದೇವನಹಳ್ಳಿ, ಮಾ.೭ಕ್ಕೆ ಚಿಕ್ಕಬಳ್ಳಾಪುರ, ಮಾ.೮ಕ್ಕೆ ಶಿಡ್ಲಘಟ್ಟ, ಮಾ.೯ಕ್ಕೆ ಚಿಂತಾಮಣಿ, ಮಾ.೧೦ಕ್ಕೆ ಶ್ರೀನಿವಾಸಪುರ, ಮಾ.೧೧ಕ್ಕೆ ಮುಳಬಾಗಿಲು, ಮಾ.೧೨ಕ್ಕೆ ಕೋಲಾರದಲ್ಲಿ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.