ಮಾ.29 ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಂಗಳೂರು,ಮಾ.೨೬- ಉಪ ಚುನಾವಣೆಯೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿದ್ದು,ಚುನಾವಣಾ ಕಾರ್ಯಗಳಲ್ಲಿ ಎಲ್ಲ ಸಚಿವರು, ಶಾಸಕರು, ಪ್ರಮುಖ ಮುಖಂಡರುಗಳು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಆ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಸಚಿವರುಗಳು, ಕ್ಷೇತ್ರಗಳ ಉಸ್ತುವಾರಿ ಸಚಿವರು, ಶಾಸಕರು, ನಾಯಕರುಗಳು ಹಾಜರಿದ್ದು, ಒಗ್ಗಟ್ಟು ಪ್ರದರ್ಶಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಂದೇಶ ರವಾನಿಸಿದ್ದಾರೆ.
ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಉಸ್ತುವಾರಿಯಾಗಿರುವ ಸಚಿವರುಗಳಿಗೂ ಉಸ್ತುವಾರಿ, ಸಹ ಉಸ್ತುವಾರಿ ಹಾಗೂ ಚುನಾವಣಾ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಸಚಿವರುಗಳು ಬರುವ ಸೋಮವಾರದಿಂದಲೇ ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ಮುಗಿಯುವವರೆಗೂ ಮೊಕ್ಕಾಂ ಹೂಡಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರುಗಳಿಗೆ ಕಟ್ಟಾಜ್ಞೆ ಮಾಡಿದ್ದಾರೆ.
ಚುನಾವಣಾ ಜವಾಬ್ದಾರಿ ಹೊತ್ತಿರುವ ಸಚಿವರುಗಳ ಜತೆಗೆ ಆಯಾ ಜಿಲ್ಲೆಗೆ ಬಿಜೆಪಿ ಶಾಸಕರುಗಳು ಚುನಾವಣಾ ಪ್ರಚಾರದಲ್ಲಿ ಜತೆಯಾಗಿ ಕೆಲಸ ಮಾಡುವಂತೆಯೂ ಸೂಚನೆ ನೀಡಲಾಗಿದೆ. ಚುನಾವಣೆ ಮುಗಿಯುವವರೆಗೂ ಇತರ ಕೆಲಸಗಳನ್ನು ಬದಿಗೊತ್ತಿ ಚುನಾವಣಾ ಗೆಲುವಿಗೆ ಶ್ರಮವಹಿಸುವಂತೆ ಎಲ್ಲರಿಗೂ ಪಕ್ಷದಿಂದ ಸಂದೇಶ ಹೋಗಿದೆ. ಉಪ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಗೆಲುವಿಗಾಗಿ ಸರ್ವಪ್ರಯತ್ನ ನಡೆಸಿದೆ.
ಬಸವ ಕಲ್ಯಾಣ ಕ್ಷೇತ್ರದ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣಸವದಿಯವರಿಗೆ, ಮಸ್ಕಿ ಕ್ಷೇತ್ರದ ಉಸ್ತುವಾರಿಯನ್ನು ಬಿ.ವೈ ವಿಜಯೇಂದ್ರ ಅವರಿಗೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು, ಇವರ ಜತೆಗೆ ಇನ್ನು ಕೆಲವು ಸಚಿವರುಗಳನ್ನು ಚುನಾವಣಾ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ನಿಯೋಜಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ