ಮಾ.28ರಂದು ಸಿರಿಗೇರಿ ನಾಗನಾಥೇಶ್ವರ ಜಾತ್ರೆ: ತೆರುಗಡ್ಡೆ ಹೊರಕ್ಕೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ25. ಗ್ರಾಮದ ಜನತೆಯ ಆದಿದೇವನಾಗಿ ಪೂಜಿಸಲ್ಪಡುವ, ಪುರಾತನ ಇತಿಹಾಸ ಹಿನ್ನೆಲೆ ಹೊಂದಿರುವ ಶ್ರೀ ನಾಗನಾಥೇಶ್ವರ ಜಾತ್ರೆಯು ಮಾ.28ರಂದು ಮಂಗಳವಾರ ನಡೆಯಲಿದೆ. ಸಾವಿರಾರು ಭಕ್ತರು ಪಾಲ್ಗೊಂಡು ಆಚರಿಸಲ್ಪಡುವ ಈ ಜಾತ್ರೆ ಅಂಗವಾಗಿ ಪ್ರತೀವರ್ಷ ಯುಗಾದಿ ಹಬ್ಬದಂದು ಶ್ರೀನಾಗನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ ಸೂರ್ಯಾಸ್ಥದ ಮುಂಚಿತವಾಗಿ ದೇವಸ್ಥಾನದ ಸಮಿತಿ ಮುಖಂಡರು ಗ್ರಾಮದ ಮುಖಂಡರ ನೇತೃತ್ವದಲ್ಲಿ ತೇರುಮನೆಯಿಂದ ತೇರನ್ನು ಹೊರಗೆ ಎಳೆದು ತರುತ್ತಾರೆ. ನಂತರ ಯುಗಾದಿ ಕಳೆದು 7ದಿನಗಳ ನಂತರ ಸಪ್ತಮಿಯಂದು ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ತೇರನ್ನು ಯುಗಾದಿ ಹಬ್ಬದಂದು ಹೊರಗೆ ತರಲಾಗಿದೆ. ತೇರಿನ ಸುರಕ್ಷತೆಯನ್ನು ಗಮನಿಸಿ ಈಗಾಗಲೇ ಮೂರು ಮನೆಗಳನ್ನು ಗ್ರಾಮದ ಬಡಿಗೆತನ ಕಸಬುದಾರರಿಂದ ಕಟ್ಟಲಾಗಿದೆ. ಜಾತ್ರೆಯದಿನ 2 ಬಯಲಾಟಗಳನ್ನು, ಮಾ.30ರಂದು ಸಿರಿಗೇರಮ್ಮ ಜಾತ್ರೆ ಅಂಗವಾಗಿ 1 ಬಯಲಾಟ ಕಾರ್ಯಕ್ರಮಗಳನ್ನು ಈವರ್ಷ ಗ್ರಾಮದ ಬಯಲಾಟ ಕಲಾವಿದರು, ಪ್ರೇಮಿಗಳು ಹಮ್ಮಿಕೊಂಡಿದ್ದಾರೆ. ಉಳಿದ ಜಾತ್ರೆಯ ತಯಾರಿಗಳು ಗ್ರಾಮದಲ್ಲಿ ನಡೆಯುತ್ತಿವೆ.