ಮಾ. 27 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್

ಕಲಬುರಗಿ.ಮಾ.25:ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲಾ ವರ್ಗದ ಕಕ್ಷಿದಾರರ ಅನುಕೂಲಕ್ಕಾಗಿ ಶನಿವಾರ ಮಾರ್ಚ್ 27 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ.ಸತೀಶ್‍ಸಿಂಗ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜಿ.ಆರ್. ಶೆಟ್ಟರ್ ಅವರು ತಿಳಿಸಿದ್ದಾರೆ.

ಈ ಮೆಗಾ ಲೋಕ ಅದಾಲತ್‍ದಲ್ಲಿ ಆಸ್ತಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯಗಳು, ಚೆಕ್‍ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ವಿಚ್ಚೇದನ ಪ್ರಕರಣ ಹೊರತುಪಡಿಸಿ ಕೌಟುಂಬಿಕ ವ್ಯಾಜ್ಯಗಳು, ಜೀವನಾಂಶ ಪ್ರಕರಣಗಳು, ದೂರವಾಣಿ ಬಾಕಿ ಬಿಲ್, ಪ್ರಕರಣಗಳು, ನೀರಿನ ಬಿಲ್ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಸೇರಿದಂತೆ ಎಲ್ಲಾ ತರಹದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು.

ಕಲಬುರಗಿ ಜಿಲ್ಲಾ ನ್ಯಾಯಾಲಯ ಹಾಗೂ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಪೀಠಗಳನ್ನು ರಚಿಸಲಾಗುವುದು. ಈ ಪೀಠದಲ್ಲಿ ಸಂಧಾನಕಾರರಾಗಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ನ್ಯಾಯಾಂಗೇತರ ಸದಸ್ಯರು ಇರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿ ಇರುವ ಪ್ರಕರಣಗಳಲ್ಲದೇ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುವುದು.

ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಲ್ಲಿ ಕಕ್ಷಿದಾರರು ತುಂಬಿದ ನ್ಯಾಯ ಶುಲ್ಕವನ್ನು ಸಂಪೂರ್ಣವಾಗಿ ಹಿಂದಿರುಗಿಸಲಾಗುವುದು. ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನ ಮಾಡಿಕೊಳ್ಳುವುದರಿಂದ ಕಕ್ಷಿದಾರ ಸಮಯ, ಹಣ ಉಳಿಯುವುದಲ್ಲದೇ ಪರಸ್ಪರ ಸಾಮರಸ್ಯ ಮುಂದುವರಿಯುತ್ತದೆ. ಮುಕ್ತಾಯಗೊಂಡ ಪ್ರಕರಣಗಳಲ್ಲಿ ಹೊರಡಿಸಲಾಗುವ ಆದೇಶಕ್ಕೆ ನ್ಯಾಯಾಲಯದಲ್ಲಿ ಹೊರಡಿಸಲಾದ ಡಿಕ್ರಿಯಷ್ಟೇ ಮಾನ್ಯತೆ ಇರುತ್ತದೆ. ಲೋಕ್ ಅದಾಲತ್‍ನಲ್ಲಿ ಹೊರಡಿಸಲಾಗುವ ಆದೇಶದ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ.

ಮೆಗಾ ಲೋಕ ಅದಾಲತ್‍ನಲ್ಲಿ ರಾಜೀ ಸಲುವಾಗಿ ಕಲಬುರಗಿ ಜಿಲ್ಲೆಯಾದ್ಯಂತ ಸುಮಾರು 25 ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದ್ದು, ಸುಮಾರು 15 ಸಾವಿರ ಪ್ರಕರಣಗಳು ರಾಜಿಗಾಗಿ ಸಿದ್ದವಾಗಿವೆ. ಮೇಲ್ಕಂಡ ದಿನದಂದು ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜರುಗುವ ಮೆಗಾ ಲೋಕ್ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕೆಂದು ಕಕ್ಷಿದಾರರು ಹಾಗೂ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.