ಮಾ.27ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಬಿ.ಎಲ್.ದೇವರಾಜು

ಕೆ.ಆರ್.ಪೇಟೆ. ಮಾ.25:- ಮಾ.27 ರ ಸೋಮುವಾರ ಬೆಳಿಗ್ಗೆ 10 ಘಂಟೆಗೆ ತಮ್ಮ ಬೆಂಬಲಿಗರ ಜೊತೆ ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಾಲೂಕು ಜೆಡಿಎಸ್ ಮುಖಂಡ ಬಿ.ಎಲ್.ದೇವರಾಜು ಪ್ರಕಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು ಯಾವುದೇ ಪೂರ್ವ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
1983 ರಲ್ಲಿ ಅಂದಿನ ಜನತಾಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದ ನಾನು 40 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಹೆಜ್ಜೆ ಹಾಕಿದ್ದೇನೆ. ಜನತಾ ಪರಿವಾರದ ಮೂಲಕ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಮಾಜಿ ಸ್ಪೀಕರ್ ಕೃಷ್ಣ ದೇವೇಗೌಡರಿಗೆ ಕೈಕೊಟ್ಟು ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದಾಗಲೂ ನಾನು ಕ್ಷೇತ್ರದಲ್ಲಿ ದೇವೇಗೌಡರ ಪರ ನಿಂತು ಪಕ್ಷ ಸಂಘಟಿಸಿದ್ದೇನೆ. ಸುಮಾರು 15 ವರ್ಷಗಳ ಕಾಲ ಹೆಚ್.ಡಿ.ದೇವೇಗೌಡರ ಪರವಾದ ಜನತಾ ಪರಿವಾರದ ತಾಲೂಕು ಘಟಕದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮಾಜಿ ಸ್ಪೀಕರ್ ಕೃಷ್ಣ ಮತ್ತೆ ದೇವೇಗೌಡರ ಪಾಳಯ ಸೇರಿದ ಮೇಲೂ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ್ದೇನೆ. ಪಕ್ಷಕ್ಕೆ ಕಿಂಚಿತ್ತೂ ಸೇವೆಯಿಲ್ಲದ ಸಚಿವ ಕೆ.ಸಿ.ನಾರಾಯಣಗೌಡರಿಗೆ 2013 ರಲ್ಲಿ ಜೆಡಿಎಸ್ ಟಿಕೆಟ್ ನೀಡಿದಾಗಲೂ ಅವರ ಪರ ಕೆಲಸ ಮಾಡಿ ಕೆ.ಸಿ.ಎನ್ ಗೆಲುವಿಗೆ ಶ್ರಮಿಸಿದ್ದೇನೆ. 2018 ರಲ್ಲಿ ಮೊದಲು ನನಗೆ ಬಿ.ಫಾರಂ ನೀಡಿ ನಾಮಪತ್ರ ಸಲ್ಲಿಸಿದ ಅನಂತರ ಕೆ.ಸಿ.ನಾರಾಯಣಗೌಡರಿಗೆ ಸಿ.ಫಾರಂ ನೀಡಿದಾಗಲೂ ಅವರ ಪರ ಕೆಲಸ ಮಾಡಿ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಆದರೆ ನನ್ನ ಪಕ್ಷ ನಿಷ್ಠೆಗೆ ಜೆಡಿಎಸ್ ವರಿಷ್ಠರು ಪುರಸ್ಕಾರ ನೀಡದ ಕಾರಣ ನನ್ನ ಬೆಂಬಲಿಗರ ಹಿತದೃಷ್ಠಿಯಿಂದ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿ.ಎಲ್.ದೇವರಾಜು ತಿಳಿಸಿದರು.
ಬೈಯುವವರಿಗೆ ಮಣೆ: ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ. ಪಕ್ಷದ ವರಿಷ್ಠರನ್ನು ಯಾರು ಬೈಯುತ್ತಾರೋ ಅವರಿಗೆ ಮಣೆ ಹಾಕಲಾಗುತ್ತಿದೆ. ಪಕ್ಷ ವರಿಷ್ಠರಿಗೆ ಕೈಕೊಟ್ಟ ಮಾಜಿ ಸ್ಪೀಕರ್ ಕೃಷ್ಣ ಅವರಿಗೆ 5 ಸಲ ಪಕ್ಷದ ಟಿಕೆಟ್ ನೀಡಿ ಅವರನ್ನು ಲೋಕಸಭೆ ಮತ್ತು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಕ್ಷೇತ್ರದ ಜನರ ಒಡನಾಟವೇ ಇಲ್ಲದ ಕೆ.ಸಿ.ನಾರಾಯಣಗೌಡರನ್ನು ಜೆಡಿಎಸ್ ವರಿಷ್ಠರು ಮುಂಬೈನಿಂದ ಕರೆ ತಂದು ಎರಡು ಸಲ ಶಾಸಕರನ್ನಾಗಿ ಮಾಡಿದರು. ಜೆಡಿಎಸ್ ತ್ಯಜಿಸುವ ಮುನ್ನ ಸಚಿವ ಕೆ.ಸಿ.ನಾರಾಯಣಗೌಡ ದೇವೇಗೌಡರು ಮತ್ತು ಅವರ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದರು. 2019 ರ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬವನ್ನು ಬೈಯ್ದ ನಾರಾಯಣಗೌಡರನ್ನು ಸೋಲಿಸಲೇ ಬೇಕೆನ್ನುವ ಛಲ ದಳಪತಿಗಳಿಗೆ ಬರಲಿಲ್ಲ. 2019 ರ ಉಪ ಚುನಾವಣೆಯಲ್ಲಿ ದೇವೇಗೌಡರಾಗಲೀ, ಹೆಚ್.ಡಿ.ಕುಮಾರಸ್ವಾಮಿಯವರಾಗಲಿ ಅಥವಾ ಕುಟುಂಬದವರಾಗಲಿ ಕ್ಷೇತ್ರಕ್ಕೆ ಆಗಮಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನ್ನ ಪರ ಪ್ರಚಾರ ನಡೆಸಲಿಲ್ಲ. ಕಳೆದ 9 ವರ್ಷಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ಆಗಮಿಸಿದ ಹೆಚ್.ಟಿ.ಮಂಜು ಅವರನ್ನು ಜಿ.ಪಂ ಸದಸ್ಯರನ್ನಾಗಿಸಿ, ಮನ್‍ಮುಲ್ ನಿರ್ದೇಶಕರನ್ನಾಗಿಸಿದ್ದಲ್ಲದೆ ಇದೀಗ ಪಕ್ಷದ ಅಭ್ಯರ್ಥಿಯನ್ನಾಗಿ ಪ್ರಕಟಿಸುವ ಮೂಲಕ ಜೆಡಿಎಸ್ ನಲ್ಲಿ ಬೈಯುವವರಿಗೆ ಮಣೆ ಹಾಕಲಾಗಿದೆ. ಕ್ಷೇತ್ರ ರಾಜಕಾರಣದಲ್ಲಿ ನನ್ನ ಪಕ್ಷ ನಿಷ್ಠೆಯೇ ನನಗೆ ಮುಳುವಾಗಿದೆ ಎಂದು ಬಿ.ಎಲ್.ದೇವರಾಜು ದೂರಿದರು.
ನನಗೆ ವಕೀಲಿ ವೃತ್ತಿಯಿದೆ. ನಾನು ರಾಜಕೀಯ ತ್ಯಜಿಸಿ ನಿಶ್ಚಿಂತೆಯಿಂದ ಇರಬಹುದು. ಆದರೆ ಕಳೆದ 40 ವರ್ಷಗಳಿಂದ ನನ್ನ ಬೆನ್ನಿಗೆ ನಿಂತ ಕಾರ್ಯಕರ್ತರ ಭಾವನೆಗಳನ್ನು ನಾನು ಗೌರವಿಸಲೇ ಬೇಕಾಗಿದೆ. ನನ್ನ ಅಭಿಮಾನಿಗಳಿಗೆ ರಾಜಕೀಯ ಶಕ್ತಿ ನೀಡಲು ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲೇಬೇಕಾಗಿದೆ. ಆದ ಕಾರಣ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ಮೂರು ಸಲ ಬಹಿರಂಗ ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಸೇರುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಬೆಂಬಲವಿಲ್ಲದಿದ್ದರೂ ಗೆಲ್ಲಬಹುದೆನ್ನುವ ಭ್ರಮೆಯಲ್ಲಿ ಜೆಡಿಎಸ್ ವರಿಷ್ಠರಿದ್ದಾರೆ. ಬಿಜೆಪಿ ಕೋಮುವಾದಿ. ಆದರೆ ಕಾಂಗ್ರೆಸ್ ಜೆಡಿಎಸ್ ಪಕ್ಷದಂತೆಯೇ ಜಾತ್ಯಾತೀತ ಪಕ್ಷ. ಜೊತೆಗೆ ರಾಷ್ಟ್ರೀಯ ಪಕ್ಷ. ಆದ ಕಾರಣ ನಾನು ನನ್ನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಜೊತೆಯಲ್ಲಿಯೇ ಸೋಮುವಾರ ಕೆ.ಪಿ.ಸಿ.ಸಿ ಕಛೇರಿಗೆ ತೆರಳಿ ಕಾಂಗ್ರೆಸ್ ಸೇರಲಿದ್ದೇನೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಮತ್ತು ಎನ್.ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿರುವುದಾಗಿ ಬಿ.ಎಲ್.ದೇವರಾಜು ಪ್ರಕಟಿಸಿದರು
ಬಿ.ಎಲ್.ದೇವರಾಜು ಅಭಿಮಾನಿ ಪಡೆಯ ಮುಖ್ಯಸ್ಥರಾದ ಬಸ್ ಕೃಷ್ಣೇಗೌಡ, ಜಿ.ಪಂ ಮಾಜಿ ಸದಸ್ಯ ರಾಮದಾಸ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಶಶಿಧರ್ ಸಂಗಾಪುರ, ಅಕ್ಕಿಹೆಬ್ಬಾಳು ವೆಂಕಟೇಗೌಡ, ವಿಠಲಾಪುರ ಸುಬ್ಬೇಗೌಡ, ವಕೀಲರಾದ ಯೋಗೇಶ್, ಸುರೇಶ್ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.