ಮಾ.23 ರಂದು ರೇಣುಕಾಚಾರ್ಯರ ಅದ್ದೂರಿ ಜಯಂತಿಗೆ ಸಿದ್ಧತೆ


ಸಂಜೆವಾಣಿ ವಾರ್ತೆ
ಕುಕನೂರು, ಮಾ.07:  ಅಖಿಲ ಕರ್ನಾಟಕ ಬೇಡ ಜಂಗಮ ಒಕ್ಕೂಟದಿಂದ ಕುಕನೂರು ಮತ್ತು ಯಲಬುರ್ಗಾ ಅವಳಿ ತಾಲೂಕಿನಿಂದ  ಮಾರ್ಚ್ 23 ರಂದು ಕುಕನೂರು ಪಟ್ಟಣದಲ್ಲಿ ಅದ್ದೂರಿಯಾಗಿ ಜಂಗಮ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಲಾಗುವುದು, ಸರ್ವ ಜಂಗಮ ಬಾಂಧವರು ತನು ಮನ ಧನ ಸೇವೆಯ ಮೂಲಕ ಜಂಗಮ ಸಮಾಜದ ಸಂಘಟನೆಗೆ ಮುಂದಾಗಿ ಎಂದು ಯಲಬುರ್ಗಾ ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.
ಕುಕನೂರು ಪಟ್ಟಣದಲ್ಲಿ ರೇಣುಕಾಚಾರ್ಯ ಜಯಂತಿಯ ಪ್ರಯುಕ್ತ ಅವಳಿ ತಾಲೂಕು ಬೇಡ ಜಂಗಮ ಒಕ್ಕೂಟದಿಂದ ನಡೆದ ಪೂರ್ವಿಬಾವಿ ಸಭೆಯಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ಇದೇ ಮಾರ್ಚ್ 23 ರಂದು ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಅಖಂಡ ಜಂಗಮ ಸಮಾಜದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡಲಾಗುತ್ತಿದೆ, ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಆಚರಿಸಿ ಇತರರಿಗೆ ಮಾದರಿಯಗಲು ಸರ್ವರೂ ಪಾಲ್ಗೊಳ್ಳಿ ಎಂದು ಶ್ರೀಗಳು ಕರೆ ಕೊಟ್ಟರು.
ಒಕ್ಕೂಟದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಮಾರ್ಚ್ 23 ರಂದು ಯಲಬುರ್ಗಾ, ಕುಕನೂರು ತಾಲೂಕು ಬೇಡ ಜಂಗಮ ಒಕ್ಕೂಟದಿಂದ ಅದ್ದೂರಿ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿದೆ, ಜಂಗಮ ಸಮಾಜದ ಮಹಿಳೆಯರಿಂದ 101 ಕುಂಭ ಮೆರವಣಿಗೆ, ಸಕಲ ಮಂಗಲ ವಾದ್ಯ ಮೇಳದೊಂದಿಗೆ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರ ಮೆರವಣಿಗೆ ಮಾಡಲಾಗುವುದು, ನಂತರ ಅನ್ನ ಪ್ರಸಾದ ಇರುತ್ತದೆ,
ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಸಚಿವ ಹಾಲಪ್ಪ ಆಚಾರ್, ಮಾಜಿ ಸಚಿವ ಬಸವರಾಜ್ ರಾಯರಡ್ಡಿ, ಜನಾರ್ಧನ್ ರೆಡ್ಡಿ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಯಲಬುರ್ಗಾ ಕುಕನೂರು ತಾಲೂಕಿನ ಎಲ್ಲ ಸ್ವಾಮೀಜಿಗಳು, ಹರ ಗುರು, ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀ ಗುರು ಶಾಂತವೀರ ಶ್ರೀಗಳು, ತಾಲೂಕು ಉಪಾಧ್ಯಕ್ಷ ಈಶಯ್ಯ ಶಿರೂರ್, ಸಿದ್ದಲಿಂಗಯ್ಯ ಚೌಡಿ, ಸೇರಿದಂತೆ ಜಂಗಮ ಸಮಾಜದ ಪ್ರಮುಖರು ಪೂರ್ವಿ ಬಾವಿ ಸಭೆಯಲ್ಲಿ ಭಾಗವಹಿಸಿದ್ದರು.