ಮಾ. 20,21ರಂದು ಡಿಜಿ ಏಕ್ಸ್ಫೋ ಅಂತರ್‍ರಾಷ್ಟ್ರೀಯ ವಸ್ತುಪ್ರದರ್ಶನ

ಕಲಬುರಗಿ, ಮಾ.18- ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕಮಿತಕರ್ ಭವನದಲ್ಲಿ ಮಾ. 20 ಹಾಗೂ 21ರಂದು ಒಟ್ಟು ಎರಡು ದಿನಗಳ ಕಾಲ ಡಿಜಿ ಏಕ್ಸ್ಫೋ ಅಂತರ್ರಾಷ್ಟ್ರೀಯ ವಸ್ತು ಪ್ರದರ್ಶನ ಕರ್ನಾಟಕ ವೀಡಿಯೊ ಮತ್ತು ಫೋಟೋ ಅಸೋಶಿಯೇಷನ್ ಹಾಗೂ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಶಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಶನ್ ಅಧ್ಯಕ್ಷ ಸೀತಾರಾಮ್ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾರ್ಯಾಗಾರದಲ್ಲಿ ಕ್ಯಾಮೆರಾ ಸೇವೆ, ಫೋಟೋಶಾಪ್ ಸಿಸಿ ಕುರಿತಾಗಿ ಉಚಿತ ತರಬೇತಿ ನೀಡಲಾಗುವುದು. ವಸ್ತು ಪ್ರದರ್ಶನದಲ್ಲಿ ಒಟ್ಟು 50 ಮಳಿಗೆಗಳನ್ನು ಹಾಕಲಾಗುತ್ತದೆ. 600ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು ಎಂದರು.
ಫೋಟೋ ಸ್ಟುಡಿಯೋ ಉಪಕರಣಗಳು, ವಿಡಿಯೋ ಕ್ಯಾಮೆರಾಗಳು, ಅಲ್ಬಮ್ ತಯಾರಿಕೆ, ವಿಡಿಯೋ ಸಂಪಾದನೆ ಪರಿಹಾರಗಳು, ಸ್ಟುಡಿಯೋ ಬೆಳಕಿನ ಉಪಕರಣಗಳು, ಮುದ್ರಕಗಳು ವಿನ್ಯಾಸ, ಟೆಂಪ್ಲೇಟು ಸಿಡಿಗಳು, ಫೋಟೋ ಲ್ಯಾಮಿನೇಷನ್ ಯಂತ್ರಗಳು ಮತ್ತು ವಸ್ತುಗಳು, ಎಲ್‍ಇಡಿ ಫೋಟೋ ಪ್ರೇಮ್‍ಗಳು, ಐಡಿ ಕಾರ್ಡ್ ವ್ಯವಸ್ಥೆಗಳು ಏಕ್ಸ್ಪೋದಲ್ಲಿ ಪ್ರದರ್ಶನಗೊಳ್ಳಲಿವೆ ಎಂಧು ಅವರು ತಿಳಿಸಿದರು.
ಕಾರ್ಯಾಗಾರವನ್ನು ಶ್ರೀ ಶರಣಬಸವೇಶ್ವರ್ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಲಿಂಗರಾಜ್ ಶಾಸ್ತ್ರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರು ಅವರು ಆಗಮಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ತೋಟದ್, ರಾಜಶೇಖರ್ ಹತ್ತೂರೆ, ಗುಂಡೇರಾವ್ ಭೂಸನೂರು, ರಾಜೇಂದ್ರ ಅಂತೂರಮಠ್, ಸಂಜಯ್ ಕೆ. ಚವ್ಹಾಣ್, ಮಡಿವಾಳಪ್ಪ ಹತ್ತೂರೆ ಮುಂತಾದವರು ಉಪಸ್ಥಿತರಿದ್ದರು.