
ಕಲಬುರಗಿ.ಮಾ.17: ಆಳಂದ್ ತಾಲ್ಲೂಕಿನ ವೀರಶೈವ ಲಿಂಗಾಯತ ಸಮಾಜದ ಬಹುದಿನಗಳ ಬೇಡಿಕೆಯಾದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಭವ್ಯವಾದ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಈಡೇರಿಸಿದ ಆಳಂದ್ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರಿಗೆ ಮಾರ್ಚ್ 20ರಂದು ಬೆಳಿಗ್ಗೆ 10 ಗಂಟೆಗೆ ಆಳಂದ್ ಪಟ್ಟಣದ ಎ.ವಿ. ಪಾಟೀಲ್‍ರ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಗುರುನಾಥ್ ಡಿ. ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗುತ್ತೇದಾರ್ ವಿಶೇಷ ಪ್ರಯತ್ನ ಶ್ಲಾಘನೀಯವಾಗಿದೆ. ಬಸವೇಶ್ವರರ ಮೂರ್ತಿಯ ಎಲ್ಲ ವೆಚ್ಚವನ್ನು ಸ್ವತ: ಗುತ್ತೇದಾರ್ ಅವರ ಕುಟುಂಬವೇ ಭರಿಸಿದೆ. ಹೀಗಾಗಿ ಪ್ರತಿಷ್ಠಾಪನೆಯ ದಿನವು ಒಂದು ರೀತಿಯಲ್ಲಿ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.
ಗುತ್ತೇದಾರ್ ಅವರ ಕಾರ್ಯವು ವೀರಶೈವ ಲಿಂಗಾಯತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹಾಗಾಗಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹಾರಕೂಡದ ಶ್ರೀಗಳನ್ನು ಆಮಂತ್ರಿಸಲಾಗುವುದು, ಆಳಂದ್ ತಾಲ್ಲೂಕಿನ ಎಲ್ಲ ಮಠಾಧೀಶರೂ ಸಹ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಿವಪ್ರಕಾಶ್ ಜಿ. ಹೀರಾ, ಗೌರಿ ಚಿಚಕೋಟಿ, ಹಣಮಂತರಾವ್ ಮಲಾಜಿ, ಶರಣಪ್ಪ ಮಲಶೆಟ್ಟಿ, ಮಲ್ಲಿಕಾರ್ಜುನ್ ಕಂದಗೂಳೆ, ಶ್ರೀಮಂತರವಾ ಗೊದೆ, ಚಂದ್ರಶೇಖರ್ ಸಾಹು, ಮಲ್ಲಿಕಾರ್ಜುನ್ ತಡಕಲ್, ಅಮೃತರಾವ್ ದೇಶಟ್ಟಿ, ಆನಂದರಾವ್ ಪಾಟೀಲ್, ಬಸವರಾಜ್ ಬಿರಾದಾರ್, ರವಿ ಮಲಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.