ಮಾ.18 ಬಿಜೆಪಿ ವಿರುದ್ಧ ಕೈ ಪ್ರತಿಭಟನೆ

ದಾವಣಗೆರೆ.ಮಾ.೧೨: ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರೇ ಕಾರಣವೆಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜಿಲ್ಲಾ ಸಚಿವರು, ಸಂಸದರ ವಿರುದ್ಧ ಇದೇ ಮಾರ್ಚ್ ೧೮ರ ಬೆಳಿಗ್ಗೆ ೧೧.೩೦ ಗಂಟೆಗೆ ನಗರದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹಪಹಪಿಸುತ್ತಿರುವ ಬಿಜೆಪಿ ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಶೇ.೪೦ ಭ್ರಷ್ಟಾಚಾರದಿಂದಾಗಿ ಶೋಷಣೆ, ಹಿಂಸೆ, ಬೆಲೆ ಏರಿಕೆ ಜನರ ಬದುಕು ಸರ್ವನಾಶವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆ ದ್ರೋಹ ಮಾಡುವುದನ್ನು ಬಿಟ್ಟು ಏನನ್ನು ಮಾಡಿಲ್ಲ ಎಂದು ಆರೋಪಿಸಿದರು.ಗುತ್ತಿಗೆದಾರರಿಂದ ಶೇಕಡ ೪೦ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಕೆಂಪಣ್ಣನವರ ಆರೋಪಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ, ಬಲವಾದ ಸಾಕ್ಷ್ಯವಾಗಿದೆ. ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ಆಧಾರ ಸಹಿತ ಸಿಕ್ಕಿಬಿದ್ದಿದ್ದರೂ ಸಹ ಭ್ರಷ್ಟಾ ಬಿಜೆಪಿ ಸರ್ಕಾರ ತಪ್ಪೇ ಮಾಡಿಲ್ಲ ಎಂಬಂತೆ ವರ್ತಿಸಿದೆ ಎಂದು ದೂರಿದರು.ದಾವಣಗೆರೆ ಜಿಲ್ಲೆಯಲ್ಲೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಶೇ.೪೦ರಷ್ಟು ಕಮೀಷನ್ ನೀಡದೇ ಯಾವುದೇ ಕಾಮಗಾರಿಗಳು ಆರಂಭವಾಗಲು ಬಿಡುತ್ತಿಲ್ಲ. ಇದಕ್ಕೆ ಅಶೋಕ ಚಿತ್ರಮಂದಿರ ಬಳಿ ನಡೆಯುತ್ತಿರುವ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯೇ ಸಾಕ್ಷಿಯಾಗಿದ್ದು, ಕೇವಲ ೧-೨ ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮಗಾರಿಯನ್ನು ಒಂದು ವರ್ಷವಾಗುತ್ತ ಬಂದಿದ್ದರೂ ಮುಕ್ತಾಯ ಮಾಡುತ್ತಿಲ್ಲ, ಸಂಸದರ ಕಮೀಷನ್ ಆಸೆಯಿಂದ ಕಳಪೆ ಕಾಮಗಾರಿ ನಡೆದು ಈ ಹಿಂದೆಷ್ಟೋ ಕಾಮಗಾರಿ ನಡೆಯುವ ವೇಳೆಯೇ ಕುಸಿತ ಉಂಟಾಗಿತ್ತು ಎಂದು ಕಿಡಿಕಾರಿದರು.