
ಸಂಜೆವಾಣಿ ವಾರ್ತೆ
ಕೊಪ್ಪಳ :ನಮ್ಮ ರಾಜ್ಯವು ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ. ಈ ರಂಗದಲ್ಲಿ ತಮ್ಮದೆಯಾದ ಕಲೆಯ ಛಾಪು ಮೂಡಿಸುವ ಪ್ರತಿಭಾನ್ವಿತ ಮಕ್ಕಳನ್ನು ಹುಡುಕಿ ಅಂತವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಅಖಿಲ ಕರ್ನಾಟಕ ‘ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ’ವನ್ನು ಇದೇ ಮಾರ್ಚ್ 17, 18, 19 ರಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ “ಪ್ರತಿಷ್ಠಾನ”ದ ಮುಖ್ಯಸ್ಥ ರಮೇಶ ಸುರ್ವೆ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು, ಪ್ರಸ್ತುತ ಇಲ್ಲಿಯವರಿಗೂ ಸಂಸ್ಥೆಯು 31 ವರ್ಷಗಳ ಕಾಲ ತನ್ನದೆಯಾದ ಸಾಮಾಜಿಕ ಕಾಯಕಗಳನ್ನು ಮಾಡುತ್ತಾ ಬಂದಿದೆ.ಈ ಹಿನ್ನಲೆಯಲ್ಲಿ ವಿಜಯನಗರ ಕರ್ನಾಟಕ ಪ್ರಾದೇಶಿಕ ಕಲಾ ಉತ್ಸವ ಹಾಗೂ 67ನೇ ಸಾಂಸ್ಕೃತಿಕ ಪ್ರತಿಭೋತ್ಸವ ನಡೆಯಲಿದೆ. ಸಾಹಿತಿ, ಡಿಜಿಟಲ್ ಗ್ರಂಥಾಲಯದ ಪಿತಾಮಹ, ನಿರ್ದೇಶಕ ಡಾ.ಸತೀಶಕುಮಾರ ಈ ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮಕ್ಕಳ ಕುರಿತು ವಿಭಿನ್ನ ನಾಟಕಗಳು, ಮಕ್ಕಳ ಚಲನ ಚಿತ್ರೋತ್ಸವ, ನೃತ್ಯ ಕಲೆ, ಪ್ರಾದೇಶಿಕ ಹಿಂದೂಸ್ಥಾನಿ ಗಾಯನ, ಕವಿಗಳಿಂದ ‘ಕವಿಗೋಷ್ಠಿ’, ಜಪದ ಗಾಯನೋತ್ಸವ, ಗಣ್ಯರಿಂದ ಮಕ್ಕಳಿಗೆ 16 ಉಪನ್ಯಾಸಗಳು, ಚಿತ್ರಕಲಾ ಹಾಗೂ ಛಾಯಾಚಿತ್ರ ಮತ್ತು ಕರಕುಶಲ ಸೇರಿದಂತೆ ಕರಾಟೆ ಪ್ರದರ್ಶನ, ಕವನ, ಚಿತ್ರ, ಪ್ರಬಂಧ ರಚನೆಗಳ ಕಾರ್ಯಗಾರ, ವಿಜಯನಗರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ‘ವಿಚಾರಣ ಸಂಕಿರಣ.’ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು. ನಾನಾ ಭಾಗದಿಂದ ಕಲಾ ತಂಡಗಳು ಕಾರ್ಯಕ್ರಮಕ್ಕೆ ಆಗಮಿಸಿ ಹೆಚ್ಚಿನ ಮೆರಗು ನೀಡುವವು ಎಂದರು. ಕೊಪ್ಪಳ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಯಿಂದ ಕಲೆಯ ಬಗೆಗೆ ಹೆಚ್ಚಿನ ಆಸಕ್ತಿ ಇದ್ದಲ್ಲಿ ನಮ್ಮ ಮೊಬೆಲ್ 9845307327 ಸಂಪರ್ಕಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ, ಪತ್ರಕರ್ತ, ಮಂಜುನಾಥ ಗೊಂಡಬಾಳ ಉಪಸ್ಥಿತರಿದ್ದರು.