ಮಾ.16 ರಂದು ರಾಯಚೋಟಿ ವೀರಭದ್ರಸ್ವಾಮಿ ರಥೋತ್ಸವ


ಧಾರವಾಡ, ಮಾ 14: ವೀರಶೈವ ಧರ್ಮದ ಗೋತ್ರಪುರುಷ, ದುಷ್ಟರ ನಿಗ್ರಹದ ಮಹಾಶಕ್ತಿ ಶ್ರೀವೀರಭದ್ರಸ್ವಾಮಿಯು ಭಾರತದ ನೆಲದಲ್ಲಿ ಪ್ರಪ್ರಥಮವಾಗಿ ಅವತಾರ ಹೊಂದಿರುವ ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿ ಶ್ರೀಕ್ಷೇತ್ರದ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ವಾರ್ಷಿಕ ಮಹಾ ರಥೋತ್ಸವವು ಮಾರ್ಚ್ 16 ರಂದು ಸಂಜೆ 4 ಗಂಟೆಗೆ ಜರುಗಲಿದೆ.
ಪ್ರತೀ ವರುಷ ರಾಯಚೋಟಿ ವೀರಭದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವದಲ್ಲಿ ಕರ್ನಾಟಕ ರಾಜ್ಯದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಹುಪಾಲು ಜಿಲ್ಲೆಗಳ ಅಸಂಖ್ಯ ಭಕ್ತಗಣವು ಶೃದ್ಧಾಭಕ್ತಿಗಳಿಂದ ಪಾಲ್ಗೊಳ್ಳುತ್ತದೆ. ನಂದ್ಯಾಲ ನಂದುಲಮಠದ ಪೂಜ್ಯ ಶಶಿಭೂಷಣ ಸಿದ್ಧಾಂತಿ ಶ್ರೀಗಳ ನೇತೃತ್ವದಲ್ಲಿ ಮಾ.14 ರಂದು ಚಂಡಿ ಹೋಮ, ಶೇಷವಾಹನೋತ್ಸವ, ಚಂದ್ರಪ್ರಭ ವಾಹನೋತ್ಸವ, ಪುಷ್ಪಾಲಂಕಾರ ವಿಶೇಷ ಪೂಜೆ, ಮಾ.15 ರಂದು ಸೂರ್ಯಪ್ರಭ ಉತ್ಸವ, ಶ್ರೀವೀರಭದ್ರಸ್ವಾಮಿಗೆ ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಚಿನ್ನದ ಕಿರೀಟ ಧಾರಣೆ ಮಹೋತ್ಸವ, ನಂದಿವಾಹನೋತ್ಸವ, ಅಹೋರಾತ್ರಿ ಭಜನೆ ಜರುಗುವವು.
ರಥೋತ್ಸವ : ಮಾ.16 ರಂದು (ಮಂಗಳವಾರ) ಪ್ರಾತಃಕಾಲ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11.45ರ ಶುಭ ಮುಹೂರ್ತದಲ್ಲಿ ಶ್ರೀವೀರಭದ್ರಸ್ವಾಮಿಗೆ ವಜ್ರದ ತ್ರಿನೇತ್ರ ಧಾರಣ ಹಾಗೂ ಮಹಾನೈವೇದ್ಯ ನಡೆಯಲಿದೆ. ಅದೇ ದಿನ ಸಂಜೆ 4 ಗಂಟೆಗೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದ ಆಗಮಿಸುವ ಭಕ್ತಗಣದ ಜಯಘೋಷದ ಮಧ್ಯೆ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ವಾರ್ಷಿಕ ಮಹಾ ರಥೋತ್ಸವವು ರಾಯಚೋಟಿ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಾ.17 ರಂದು ಮಹಾಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ, ಹಂಸವಾಹನೋತ್ಸವ, ಮಾ.18 ರಂದು ಅಶ್ವ ವಾಹನೋತ್ಸವ ಹಾಗೂ ಮಾ.19 ರಂದು ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ತಿಳಿಸಿದ್ದಾರೆ.
ಹುಬ್ಬಳ್ಳಿ ಭಕ್ತರ ರಥ : ಹುಬ್ಬಳ್ಳಿ ನಗರದ ಭಕ್ತ ವೃಂದದ ಗಣ್ಯರಾದ ನ್ಯಾಯವಾದಿ ಪ್ರಕಾಶ ಅಂದಾನಿಮಠ, ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಪಿ.ಎಂ. ಚಿಕ್ಕಮಠ, ಶಂಕರ ಕುರ್ತಕೋಟಿ, ಎಂ.ಐ. ದೇಶನೂರ, ರಾಚಯ್ಯ ಮಠಪತಿ, ಶಿವಾನಂದ ನಾಗಠಾಣ, ಅನಿಲ ಉಳ್ಳಾಗಡ್ಡಿ, ರಮೇಶ ಬುಡರಕಟ್ಟಿಮಠ ಮುಂತಾದವರ ಸಂಘತ ಪ್ರಯತ್ನದ ಫಲವಾಗಿ ಉತ್ತರಕರ್ನಾಟಕ ಭಾಗದ ಭಕ್ತರು ಸುಮಾರು 9 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಕಳೆದ ವರ್ಷ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಈ ರಥೋತ್ಸವದ ದಶಮಾನೋತ್ಸವ ಜರುಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.