ಮಾ.14ರಂದು ಪಟ್ಟಣದಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕೆ.ಆರ್.ಪೇಟೆ.ಮಾ.08:- ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ 14 ರಂದು ಪಟ್ಟಣದ ಹೊರವಲಯದಲ್ಲಿರುವ ಜಯಮ್ಮ ರಾಮಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯ ಯುವಜನಸೇವೆ,ಕ್ರೀಡಾ ಹಾಗು ರೇಷ್ಮೆ ಸಚಿವ ಡಾ.ಕೆ.ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾದಿಕಾರಿಗಳು , ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಸದಸ್ಯರ ಪೂರ್ವಭಾವಿಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ ನಾಡು- ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ಮತ್ತು ಕ್ರೀಡೆಗೆ ಮೊದಲಿನಿಂದಲೂ ನಾನು ಆದ್ಯತೆ ನೀಡುತ್ತಾ ಬಂದಿದ್ದೇನೆ. ಕಳೆದ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ತಾಲ್ಲೂಕು ಸಮ್ಮೇಳನಗಳನ್ನು ನಡೆಸಲಾಗಿದೆ 6 ನೇ ಕನ್ನಡ ಸಾಹಿತ್ಯ ಸಮ್ಮೇಳನವೂ ರಚನಾತ್ಮಕವಾಗಿ ಸರಳವಾಗಿ ಆಡಂಬರವಿಲ್ಲದೆ ಸಾಹಿತ್ಯದ ರಸದೂಟವನ್ನು ಸವಿಯುವಂತೆ ಮಾಡಲು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಸಮ್ಮೇಳನವನ್ನು ಪಟ್ಟಣದ ಹೊರವಲಯದ ನಾಗಮಂಗಲರಸ್ತೆಯಲ್ಲಿರುವ ರಾಮಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಸಲು ಸೂಚಿಸಿದ ಸಚಿವರು ಹಾರ ತುರಾಯಿ,ಶಾಲಿಗೆ ಆದ್ಯತೆ ನೀಡದೆ ಪುಸ್ತಕ ಸಂಸ್ಕೃತಿ ಯನ್ನು ಜಾರಿಗೆ ತನ್ನಿ. ಸಮಿತಿ ಮೂಲಕ ಸಾಹಿತ್ಯದ ಆಸಕ್ತರು ಕುಳಿತು ಚರ್ಚಿಸಿ 6 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿ, ಯಾವುದೇ ರಾಜಕೀಯ ಗೊಂದಲವಿಲ್ಲದ ಶುದ್ದ ಸಾಹಿತ್ಯ ಸಮ್ಮೇಳನ ನಡೆಸಿ ಎಂದು ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಶ್ವಿ ಮಾತನಾಡಿ ಕ್ಷೇತ್ರದ ಶಾಸಕರಾದ ನಾರಾಯಣಗೌಡರು ಸಚಿವರಾದ ನಂತರ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ. ಅವರ ಅವಧಿಯಲ್ಲಿ ಹಿಂದೆ ಒಂದು ಜಿಲ್ಲಾ ಸಮ್ಮೇಳನ ,ಮೂರು ತಾಲ್ಲೂಕು ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅದೇ ರೀತಿಯ ಸಹಾಯವನ್ನು ಈ ಸಮ್ಮೇಳನಕ್ಕೆ ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಳೆದ ಸಾಹಿತ್ಯ ಸಮ್ಮೇಳನದ ವಿವರ, ಈ ಸಮ್ಮೇಳನದ ಅಂದಾಜು ವೆಚ್ಚ, ಸಮ್ಮೇಳನದಲ್ಲಿ ನಡೆಸಬೇಕಾದ ಕಾರ್ಯಕ್ರಮದ ಮಾಹಿತಿಗಳನ್ನು ಸಭೆಯಲ್ಲಿ ವಿವರಿಸಿದರು
ಸಭೆಯಲ್ಲಿ ಬಳ್ಳೇಕೆರೆ ಮಂಜುನಾಥ್, ಹರಿಚರಣ್ ತಿಲಕ್, ಬಲ್ಲೇನಹಳ್ಳಿ ಮಂಜುನಾಥ್, ಪದ್ಮೇಶ್, ಇ.ಒ ಸತೀಶ್ ಸೇರಿದಂತೆ ಹಲವರಿದ್ದರು