
ಬೀದರ್:ಮಾ.7: ತಾಲ್ಲೂಕಿನ ಅಷ್ಟೂರ ಗ್ರಾಮದಲ್ಲಿ ಹಜರತ್ ಸುಲ್ತಾನ್ ಅಹ್ಮದ್ ಶಾಹ ವಲಿ ಬಹಮನಿ ಸಂದಲ್ ಜಾತ್ರಾ ಮಹೋತ್ಸವ ಮಾರ್ಚ್ 13ರಿಂದ ಆರಂಭವಾಗಲಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಮಾಡ್ಯಾಳದ ಶಿಷ್ಯರು ಪಾದಯಾತ್ರೆಯಲ್ಲಿ ಅಷ್ಟೂರಿಗೆ ಬಂದು 13ರಂದು ಸಂಜೆ 6ಕ್ಕೆ ಮಂತ್ರಪಠಣ ಮಾಡಿ ದೀಪ ಬೆಳಗಿಸಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ.
ಮುಸ್ಲಿಮರು ಗುಲಾಬಿ ಹೂವಿನ ನೀರಿನಿಂದ ಸಮಾಧಿಯನ್ನು ಶುದ್ಧಿಗೊಳಿಸಿ ಹೂವಿನಿಂದ ಅಲಂಕರಿಸಲಿದ್ದಾರೆ. ಮಹ್ಮದ್ ಸುಲ್ತಾನ್ ಖಲೀಲ್ ಶಾಹ ಬಹಮನಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುವರು.
ಮಾರ್ಚ್ 16ರಂದು ದೀಪಾಲಂಕಾರ, 17ರಂದು ಮಾಲಿದ್ದಿ ನೈವೇದ್ಯ ಸಮರ್ಪಣೆ, ಸಿಡಿಮದ್ದು ಪ್ರದರ್ಶನ ಹಾಗೂ 18ರಂದು ಸಮಾರೋಪ ನಡೆಯಲಿದೆ. ಅಂದು ಸಂಜೆ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.