ಮಾ 12 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

ಹುಬ್ಬಳ್ಳಿ,ಮಾ6: ಇಲ್ಲಿನ ಉಣಕಲ್ ಸಿದ್ದೇಶ್ವರ ಮಹಾಸ್ವಾಮಿಗಳ 102 ನೇ ವರ್ಷದ ಪುಣ್ಯಾರಾಧನೆ ಹಾಗೂ ಯುಗಾದಿ ಮಹೋತ್ಸವದ ರಥೋತ್ಸವದ ನಿಮಿತ್ತ ಮಾ. 12 ರಿಂದ ಮಾ. 26 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ರಥೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವು ಸಂಭ್ರಮದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. 12 ರಂದು ಮಹಾ ಜಾಗರಣೆಯೊಂದಿಗೆ ಭಜನೆ ನಡೆಯಲಿದೆ. ಮಾ13 ರಂದು ಸಿದ್ದೇಶ್ವರ ಸ್ವಾಮಿಗಳ ಮೂರ್ತಿಗೆ ಮಹಾ ರುದ್ರಾಭಿಷೇಕ ಮಾಡಿ, ಶಿವನಾಮ ಸಪ್ತಾಹ ಪ್ರಾರಂಭಿಸಲಾಗುವುದು. ಅಂದು ಸಂಜೆ ಧಾರವಾಡದ ಮೂರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪ್ರವಚನ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾ. 13 ರಿಂದ ಮಾ. 21 ರವರೆಗೆ ಪ್ರವಚನ ನೀಡಲಿದ್ದಾರೆ. ಪ್ರತಿನಿತ್ಯ ರಾತ್ರಿ 10 ಗಂಟೆಗೆ ವಿವಿಧ ಭಜನಾಮಂಡಳಿಗಳಿಂದ ಭಜನೆ ನಡೆಯಲಿದೆ ಎಂದರು.
ಮಾ.17 ರಂದು ಮೂರುಸಾವಿರಮಠದ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು, ಮಾ. 18 ರಂದು ಹೊಸಳ್ಳಿಯ ಬೋಧಿಶ್ವರ ಸಂಸ್ಥಾನಮಠದ ಬೋಧಿಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮಾ. 19 ರಂದು ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಮಾ. 20 ರಂದು ಕುಂದಗೋಳದ ಕಲ್ಯಾಣಪುರ ಬಣ್ಣವಣ್ಣಜ್ಜನವರು, ಮಾ.21 ರಂದು ಮನಗುಂಡಿಯ ಬಸವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು ಎಂದರು.
ಮಾ. 22 ರಂದು ಸಿದ್ದೇಶ್ವರ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10.30 ಕ್ಕೆ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾಮೂಹಿಕ ವಿವಾಹ ಜರುಗಲಿದೆ. ಸಂಜೆ 5.30 ಕ್ಕೆ ಸಂಭ್ರಮದಿಂದ ರಥೋತ್ಸವ ಜರುಗಲಿದೆ. ಮಾ. 23 ರಿಂದ 26 ರವರೆಗೆ ಬಯಲು ಗಣ ಕುಸ್ತಿಗಳು ನಡೆಯಲಿವೆ. ಈ ದಿನಗಳಲ್ಲಿ ಪ್ರತಿದಿನ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 26 ರಂದು ತೇರಿನ ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ರಾಮಣ್ಣ ಪದ್ಮಾಣ್ಣವರ, ಕಾರ್ಯದರ್ಶಿ ಅಡಿವೆಪ್ಪ ಮೆಣಸಿನಕಾಯಿ, ಸದಸ್ಯರಾದ ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಬೆಂಗೇರಿ, ಡಾ.ಬಿ.ಎಸ್.ಮಾಳವಾಡ, ಬಸವರಾಜ ಮಾಡಳ್ಳಿ, ಶಿವಣ್ಣ ಶಿರಗುಪ್ಪಿ ಸೇರಿದಂತೆ ಮುಂತಾದವರು ಇದ್ದರು.