
ಗುಳೇದಗುಡ್ಡ, ಮಾ3 : ಕರ್ನಾಟಕ ಜಾನಪದ ಪರಿಷತ್ತು,ಬೆಂಗಳೂರು,ಜಿಲ್ಲಾ ಘಟಕ ಬಾಗಲಕೋಟೆ, ಗುಳೆದಗುಡ್ಡ ತಾಲ್ಲೂಕು ಘಟಕದ ಆಶ್ರಯದಲ್ಲಿ ಮಾ.12 ರವಿವಾರದಂದು ತಾಲ್ಲೂಕಿನ ಹಂಸನೂರು ಗ್ರಾಮದಲ್ಲಿ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಬಸವರಾಜ ಯಂಡಿಗೇರಿ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.12 ರಂದು ಕಲಾವಿದರ ತವರೂರು ಹಂಸನೂರು ಗ್ರಾಮದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕಲಾ ರಂಗಮಂದಿರ ಆವರಣದಲ್ಲಿ ಸಮ್ಮೇಳನ ಆಯೋಜಿಸಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ, ಮಹಿಳೆಯರ ಕುಂಭಮೇಳ ಹಾಗೂ ಸಕಲ ಜನಪದ ವಾದ್ಯ ಮೇಳಗಳೊಂದಿಗೆ ಜರುಗುವುದು. ಸಮ್ಮೇಳನದ ಉದ್ಘಾಟನೆ, ತಾಲ್ಲೂಕಿನ ಜಾನಪದ ವಿಷಯಕ್ಕೆ ಸಂಬಂಧಿಸಿದ ಗೋಷ್ಠಿಗಳು, ಕಲಾವಿದರಿಗೆ ಸನ್ಮಾನ, ಜಾನಪದ ಕಲಾ ತಂಡಗಳ ಪ್ರದರ್ಶನ, ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಅನೇಕ ಕಲಾತಂಡಗಳು ಈ ಜಾನಪದ ಸಮ್ಮೇಳನದಲ್ಲಿ ಭಾಗವಹಿಸಿ ಮೆರಗುತರಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಎಂ.ಜೋಶಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕಸಾಪ ತಾಲ್ಲೂಕು ಅಧ್ಯಕ್ಷ ಡಾ.ಎಚ್.ಎಸ್.ಘಂಟಿ,ಕಜಾಪ ಕೋಶಾಧ್ಯಕ್ಷ ವಿಠ್ಠಲಸಾ ಕೆ. ಬದಿ,ಮಲ್ಲಿಕಾರ್ಜುನ ಕಲಕೇರಿ ಮುಂತಾದವರಿದ್ದರು.