ಮಾ. 12ರಂದು ಮಾದಾರ ಚನ್ನಯ್ಯನವರ ಜೀವನ ಆಧಾರಿತ ಕರಿಕಾಲ ಚೋಳ ನಾಟಕ ಪ್ರದರ್ಶನ

ಕಲಬುರಗಿ:ಮಾ.9: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಾರ್ಚ್ 12ರಂದು ಬೆಳಿಗ್ಗೆ 11-45 ಗಂಟೆಗೆ ಶಿವಶರಣ ಮಾದಾರ ಚನ್ನಯ್ಯನವರ ಜೀವನ ಆಧಾರಿತ ಸಾಮ್ರಾಟ್ ಕರಿಕಾಳ ಚೋಳ ಮೇಘಾ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರ ನೈಜ ವಿಚಾರಗಳು ಪ್ರಸ್ತುತ ಜನಾಂಗಕ್ಕೆ ಬಹಳ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಇಂತಹ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾಂತೇಶ್ ನವಲಕರ್ ಅವರು ನಾಟಕ ರಚಿಸಿದ್ದಾರೆ. ಚೆನ್ನೈ, ಕಂಚಿ, ಪುದುಕೋಟೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧೆಡೆ ತೆರಳಿ ಮಾದಾರ ಚನ್ನಯ್ಯ ಹಾಗೂ ಕರಿಕಾಲ ಚೋಳ ರಾಜನ ಕುರಿತು ಇರುವ ವ್ಯತ್ಯಾಸಗಳ ಕುರಿತು ಮಾಹಿತಿ ಸಂಗ್ರಹಿಸಿ ನಾಟಕವನ್ನು ರಚಿಸಿದ್ದಾರೆ. ಬಸವಣ್ಣ ಹಾಗೂ ಚೋಳ ರಾಜನಿಗೆ ವ್ಯತ್ಯಾಸಗಳಿವೆ. ಸಾಕ್ಷಾತ್ ಶಿವನ ಆರಾಧಕನಾಗಿದ್ದ ಚೋಳ ರಾಜನಿಗೆ ಶಿವನು ದರ್ಶನ ನೀಡಿದಾಗ ಪ್ರಸಾದ ಸ್ವೀಕರಿಸು ಎಂದು ಬೇಡಿಕೊಳ್ಳುತ್ತಾನೆ. ಆಗ ಶಿವನು ನಾನು ಮಾದಾರ ಚನ್ನಯ್ಯನ ಅಂಬಲಿಯನ್ನು ಪ್ರಸಾದ ರೂಪದಲ್ಲಿ ಸೇವಿಸಿದ್ದೇನೆ ಎಂದಾಗ ಚೋಳ ರಾಜನು ಅಂದಿನಿಂದ ಪರಿವರ್ತನೆಯಾಗುತ್ತಾನೆ. ದೇವರಿಗೆ ಇಲ್ಲದ ಈ ಜಾತಿ ಬೇಧ ಮನುಷ್ಯರಿಗೆ ಯಾಕೆ? ಎಂದು ಬದಲಾಗುತ್ತಾನೆ. ಇಂತಹ ವಿಚಾರಗಳು ಯುವ ಜನಾಂಗಕ್ಕೆ ಪ್ರಸ್ತುತ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಶಿ, ನಾಟಕ ರಚನೆಕಾರ ಮಹಾಂತೇಶ್ ನವಲಕಕರ್, ಶಾಂತಲಿಂಗಯ್ಯ ಮಠಪತಿ, ಲಿಂಗರಾಜ್ ತಾರಫೈಲ್ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಿಗಂಬರ್ ತ್ರಿಮೂರ್ತಿ, ಶ್ರೀಮಂತ್ ಭಂಡಾರಿ, ಶಿವಶಂಕರ್ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು