ಮಾ.10ರಂದು ದಸಂಸ ಜಿಲ್ಲಾ ಮಟ್ಟದ ವಿಚಾರ ಸಂಕಿರಣ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.07:- ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಮಾರ್ಚ್ 10ರಂದು ಬೆಳಿಗ್ಗೆ 11ಕ್ಕೆ ನಗರದ ಪುರಭವನದಲ್ಲಿ ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಆಶಯದ ‘ಅಸ್ಪೃಶ್ಯತೆ ಅಳಿಯಲಿ ಮನುಷ್ಯತ್ವ ಉಳಿಯಲಿ’ ಎಂಬ ಶೀರ್ಷಿಕೆಯಲ್ಲಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಸಂಯೋಜಕ ದೇವಗಳ್ಳಿ ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಸಚಿವ ಸತೀಶ್ ಜಾರಕಿಹೊಳಿ, ಆಶಯ ಭಾಷಣ ಮಾಡಲಿದ್ದಾರೆ. ಸಮಿತಿ ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜು ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ವಿಚಾರ ಸಂಕಿರಣದಲ್ಲಿ ಚಿಂತಕ ಎಸ್ ತುಕಾರಾಮ್ ಅವರಿಂದ ‘ಸರ್ವರಿಗೂ ಸಾಮಾಜಿಕ ನ್ಯಾಯ ಸರ್ವಧರ್ಮ ಸಮನ್ವಯತೆ: ಬಿ.ಆರ್. ಅಂಬೇಡ್ಕರ್’ ವಿಷಯ ಮಂಡನೆ, ವಿಚಾರವಾದಿ ಎಲ್.ಎನ್. ಮುಕುಂದರಾಜು ಅವರಿಂದ ‘ಜಾತಿ ವಿನಾಶ ಹಾದಿಯಲ್ಲಿ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ: ಪರಿಕಲ್ಪನೆ ಮತ್ತು ಪ್ರಸ್ತುತತೆ’ ವಿಷಯ ಹಾಗೂ ವಿಚಾರವಾದಿ ಎಸ್. ಶಿವರಾಜಪ್ಪ ಅವರಿಂದ ‘ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ನಿರ್ಮೂಲನೆ: ಬಸವಣ್ಣನವರ ಆಶಯಗಳು’ ವಿಷಯದಲ್ಲಿ ಗೋಷ್ಠಿಗಳು ನಡೆಯಲಿವೆ. ಸಮಾರೋಪದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ ಭಾಷಣ ಮಾಡುವರು ಎಂದು ತಿಳಿಸಿದರು.