
ಮಧುಗಿರಿ, ಮಾ. ೪- ಶ್ರೀ ಕೈವಾರಯೋಗಿ ನಾರಾಯಣ ಜಯತೋತ್ಸವವನ್ನು ಮಾ.೭ ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್. ಶಂಕರನಾರಾಯಣ ತಿಳಿಸಿದರು.
ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ತಾಲ್ಲೂಕು ಬಲಿಜ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀ ಕೈವಾರಯೋಗಿ ನಾರಾಯಣ ಜಯತೋತ್ಸವದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ.೭ ರಂದು ಬೆಳಿಗ್ಗೆ ೧೦.೩೦ ಕ್ಕೆ ಕೈವಾರಯೋಗಿ ನಾರಾಯಣ ತಾತಯ್ಯ ಅವರ ಭಾವ ಚಿತ್ರದೊಂದಿಗೆ ಮಲ್ಲೇಶ್ವರ ಸ್ವಾಮಿ ದೇವಾಲಯ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ ಕಳಸ, ರಾಮ್‌ಡೋಲ್, ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುವುದು ಎಂದರು.
ಎಂ.ಎಸ್.ರಾಮಯ್ಯ ಭವನದಲ್ಲಿ ಕೈವಾರ ತಾತಯ್ಯ ಕೀರ್ತನೆಗಳು, ತಾಲ್ಲೂಕಿನ ಬಲಿಜ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ, ಉನ್ನತ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟರಾಮು, ಖಜಾಂಚಿ ಆರ್.ಎಲ್.ಎಸ್.ರಮೇಶ್, ಮುಖಂಡರಾದ ವೇಣುಗೋಪಾಲ್, ಶ್ರೀನಿವಾಸ್, ಲಕ್ಷ್ಮೀನಾರಾಯಣ, ಎಂ.ಎಸ್.ಆರ್.ಬಿ.ಕುಮಾರ್, ಸೀಬಿ ನರಸಿಂಹಯ್ಯ, ಟಿ. ಪ್ರಸನ್ನಕುಮಾರ್, ಚಲಪತಿ, ರಾಘವೇಂದ್ರ, ನಾರಾಯಣಪ್ಪ, ಹರಿಹರಮೂರ್ತಿ, ದೋಲಿ ಬಾಬು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.