ಮಾ.೬ ರಂದು ನೀರು ಸರಬರಾಜು ಕಾರ್ಮಿಕರ ಧರಣಿ 

ದಾವಣಗೆರೆ.ಮಾ.೩; ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರ ಸೇವೆಯನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿ ಮಾ‌ ೬ ರಂದು ಬೆಳಗ್ಗೆ ೧೦ ಕ್ಕೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ನೀರು ಸರಬರಾಜು ಮತ್ತು ಕಾವಲುಗಾರರ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎನ್. ನೀಲಗಿರಿಯಪ್ಪ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಕಳೆದ ೧೦-೧೫ ವರ್ಷಗಳಿಂದ ನಿರಂತರವಾಗಿ ನಾಗರೀಕರು ನೀರು ಪೂರೈಕೆಯ ಕೆಲಸ ಮಾಡುತ್ತಿದ್ದಾರೆ.ನಮ್ಮ ಮುಖ್ಯ ಬೇಡಿಕೆಯಾದ ನೇರಪಾವತಿ ಮಾಡಬೇಕೆಂದು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಖಾಯಂಗೊಳಿಸುವ ತನಕ ಎಲ್ಲಾ ಗುತ್ತಿಗೆ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆದಾರರು ಕಾರ್ಮಿಕರರಿಂದ ಕಟಾಯಿಸಲಾದ ಪಿ.ಎಫ್. ಹಾಗು ಇ.ಎಸ್.ಐ. ಗಳನ್ನು ಸರಿಯಾಗಿ ಪಾವತಿಸದೇ ಹಲವೆಡೆ ಹಗರಣಗಳು ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರು.ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶವನ್ನು ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್,ರಾಧಾಕೃಷ್ಣ,ಗುತ್ಯಪ್ಪ,ರಜನಿಕಾಂತ್, ಅಜ್ಜಯ್ಯ ಮತ್ತಿತರರಿದ್ದರು.