
ದಾವಣಗೆರೆ.ಮಾ.೧: ಕುಕ್ಕುವಾಡ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಹಾನಿ ಮತ್ತು ಕಬ್ಬು ಬೆಳೆದಿರುವ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಮಾರ್ಚ್ 6ರ ಬೆಳಿಗ್ಗೆ 10.30ಕ್ಕೆ ಕಾರ್ಖಾನೆ ಎದುರು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಚಿಮಣಿಯಿಂದ ಹೊರ ಸೂಸುವ ಹೊಗೆಯ ಬೂದಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಬಾರದು. ಕಾರ್ಖಾನೆ ಆವರಣದಲ್ಲಿ ಇದನ್ನು ಸಂಗ್ರಹಿಸಿ, ಸಂಸ್ಕರಿಸಬೇಕು. ಕಬ್ಬು ಕಟಾವು ಮಾಡಲು ನಿಗಧಿತ ಸಮಯದಲ್ಲಿ ಪರ್ಮಿಟ್ ಕೊಡುತ್ತಿಲ್ಲ. ಇದರಿಂದ ಕಬ್ಬಿನ ತೂಕ ಕಡಿಮೆಯಾಗಿ, ರೈತನಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಬ್ಬು ನಾಟಿ ಮಾಡಿದ 10 ರಿಂದ 11 ತಿಂಗಳೊಳಗೆ ಪರ್ಮಿಟ್ ಕೊಡಬೇಕು. ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಳವಾಗಿದೆ. ಈ ವೆಚ್ಚ ಕಬ್ಬಿನ ಬೆಲೆಯ ಅರ್ಧದಷ್ಟು ಆಗಿದೆ. ಇದರಿಂದ ಕಬ್ಬು ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಯಂತ್ರಗಳ ಮೂಲಕ ಕಬ್ಬು ಕಟಾವು ಮಾಡಿ, ಕಾರ್ಖಾನೆಗೆ ಸಾಗಿಸುವ ಜವಾಬ್ದಾರಿಯನ್ನು ಕಾರ್ಖಾನೆ ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಕಬ್ಬಿನ ಟನ್ ಗೆ 3100 ರೂ., ಕೊಡಬೇಕು ಎಂದು ರಾಜ್ಯ ಸರ್ಕಾರ ನಿಗದಿ ಪಡಿಸಿದೆ. ಆದರೆ ಈ ಕಾರ್ಖಾನೆಯಲ್ಲಿ ಟನ್ನಿಗೆ 2821 ರೂ., ಮಾತ್ರ ಕೊಡಲಾಗುತ್ತಿದೆ. ಇದು ಟನ್‌ಗೆ 279 ರೂಪಾಯಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಈ ಹಂಗಾಮಿನಲ್ಲಿ ಸರ್ಕಾರ ನಿಗದಿಪಡಿಸಿರುವ ಬೆಲೆ 3100 ರೂ., ತಕ್ಷಣದಿಂದ ಕೊಡಬೇಕು. ಈಗಾಗಲೇ ಕಬ್ಬು ಸರಬರಾಜು ಮಾಡಿರುವ ರೈತರಿಗೂ 279 ರೂಪಾಯಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಕಬ್ಬು ಸರಬರಾಜು ಮಾಡಿ, 2 ತಿಂಗಳಾದರೂ ಅಂತಿಮ ಬಿಲ್ ಪಾವತಿಸಿರುವುದಿಲ್ಲ. ರಾಜ್ಯ ಸರ್ಕಾರದ ಆದೇಶದಂತೆ ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ರೈತರಿಗೆ ಪೂರ್ಣ ಹಣ ಪಾವತಿಸಬೇಕು. ಕಾರ್ಖಾನೆಯಲ್ಲಿ ಷೇರುಹೊಂದಿರುವ ರೈತರಿಗೆ ಲಾಭಾಂಶ ಕೊಡಬೇಕು ಮತ್ತು ಷೇರು ವರ್ಗಾವಣೆ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಹೇಳಿದರು.ಕಾರ್ಖಾನೆ ಆವರಣದ ಕಚೇರಿಯಲ್ಲಿ ಷೇರು ವರ್ಗಾವಣೆ ಪ್ರಕ್ರಿಯೆ ನಡೆಯಬೇಕು. ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠವೇತನ ಕಾಯ್ದೆ ಅನ್ವಯ ವೇತನವನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು. ಸಕ್ಕರೆ ಕಾರ್ಖಾನೆಯವರು ವಿದ್ಯುತ್ ಅವಘಡಗಳಿಂದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು ಸುಟ್ಟಿರುವ ಕಬ್ಬನ್ನು ಖರೀದಿಸುವಾಗ ತೂಕದಲ್ಲಿ ಟನ್ ಒಂದಕ್ಕೆ 250 ಕೆ.ಜಿ ಕಡಿತಗೊಳಿಸಿ, ಲೆಕ್ಕ ಮಾಡುತ್ತಾರೆ. ಇದು ಬೆಂಕಿಗೆ ಅಹುತಿಯಾದ ಬೆಳೆಯಿಂದ ತೀವ್ರ ನಷ್ಟ ಅನುಭವಿಸಿದ ರೈತನ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದ್ದರಿಂದ ಸುಟ್ಟ ಕಬ್ಬಿನ ನೈಜ ತೂಕ ಪರಿಗಣಿಸಿ ಲೆಕ್ಕ ಮಾಡಿ, ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲಾಡಳಿತ ಕಬ್ಬು ಬೆಳೆಯುವ ರೈತರಿಗೆ ಟಿಸಿಗಳನ್ನು ಕೂಡಲೇ ವಿತರಿಸಬೇಕು. ಅಲ್ಲದೇ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.