ಮಾ.೫-೧೬ ವರೆಗೆ ಎಡದಂಡೆ ನಾಲೆಗೆ ನೀರು

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೨೪- ನೀರಾವರಿ ಇಲಾಖೆ, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಿಡಿಒಗಳು ಸಹಕಾರದೊಂದಿಗೆ ಕೆರೆಗಳನ್ನು ಸ್ವಚ್ಛಗೊಳಿಸಿಕೊಂಡು ನೀರನ್ನು ತುಂಬಿಸಿ ಜನರು ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತುಂಗಭದ್ರಾ ಯೋಜನೆಯ ೧೨೧ ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ’ಬೆಳೆದು ನಿಂತ ಬೆಳೆಗಳಿಗೆ ಹಾಗೂ ಬೆಸಿಗೆ ಕಾಲದಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸುವ’ ಉದ್ದೇಶದಿಂದ ನಡೆಸಿದ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ೫-೩-೨೦೨೪ ರಿಂದ ೧೬-೩- ೨೦೨೪ ರವರೆಗೆ ೧೨೦೦ ಕ್ಯೂಸೇಕ್ಸ್ ನೀರು ಬೀಡಲಾಗುತ್ತದೆ ಆ ಅವಧಿಯಲ್ಲಿ ಕೆರೆಗಳನ್ನು ತುಂಬಿಸಿಕೊಳ್ಳಿ, ನೀರಿನ ಕೊರತೆ ಯಾದಲ್ಲಿ ಅದಕ್ಕೆ ನೀವೆ ಹೊಣೆಗಾರರಾಗುತ್ತಿರಿ ಎಂದರು.
ಸಭೆಯಲ್ಲಿ ಗಾಂಧಿನಗರ, ಜಾಲಿಹಾಳ, ದೇವರಗುಡಿ, ದಡೆಸ್ಗೂರು, ಒಳಬಳ್ಳಾರಿ, ಸೋಮಲಾಪುರ, ಮಾಡಶಿರವಾರ, ಬಾದರ್ಲಿ, ರಾಗಲಪರ್ವಿ, ಚೆನ್ನಳ್ಳಿ, ಸಾಲಗುಂದಾ ಸೇರಿದಂತೆ ಪ್ರತಿ ಪಂಚಾಯತಿ ಪಿಡಿಒಗಳಿಂದ ವಯಕ್ತಿಕವಾಗಿ ಸದ್ಯದ ನೀರಿನ, ಕೆರೆಯ ಪರಿಸ್ಥಿತಿ ಏನು ಎಂಬುದನ್ನು ಕೇಳಿ ಶಾಸಕರು ಮಾಹಿತಿ ಪಡೆದರು.
ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ, ಇಒ ಚಂದ್ರಶೇಖರ, ಪೌರಾಯುಕ್ತ ಮಂಜುನಾಥ ಗುಂಡೂರ, ಎಡಿ ಅಮರ ಗುಂಡಪ್ಪ, ಎಇಇ ಶಿವಪ್ಪ ಐಹೋಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ನೀರಾವರಿ ಇಲಾಖೆ ಜೆ.ಇ, ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.