ಮಾ.೨೬ಕ್ಕೆ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಮಾರಂಭ

ಮಾನ್ವಿ,ಮಾ.೨೬- ಬೆಳಿಗ್ಗೆ೧೦ಗಂಟೆಗೆ ಮಾನ್ವಿ ಪಟ್ಟಣದ ಟೌನ್ ಹಾಲ್‌ನಲ್ಲಿ ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಎರಡನೇ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನ್ಹಾಳ ಹೇಳಿದರು.
ಗುರುವಾರ ಮಾನ್ವಿ ಪಟ್ಟಣದಲ್ಲಿ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಕವಿಗಳು ಹಾಗೂ ಕತೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ವರ್ಷಗಳಿಂದ ರಾಜ್ಯಮಟ್ಟದ ಸಾಹಿತ್ಯ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ೨೦೨೨ನೇ ಸಾಲಿನಲ್ಲಿ ಪ್ರಕಟವಾದ ಕಥೆ ಮತ್ತು ಕವನ ಸಂಕಲನಗಳನ್ನು ಆಯ್ಕೆ ಮಾಡಲು ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ೪೦ಕ್ಕೂ ಅಧಿಕ ಕವಿಗಳು ಹಾಗೂ ಕಥೆಗಾರರು ತಮ್ಮ ಕೃತಿಗಳನ್ನು ಕಳಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದರು.
ತೀರ್ಪುಗಾರರಾಗಿ ಕಥಾ ವಿಭಾಗದ ಸ್ಪರ್ಧೆಯಲ್ಲಿ ಮೈಸೂರಿನ ಹಿರಿಯ ಸಾಹಿತಿ ಜಿ.ಪಿ.ಬಸವರಾಜು ಹಾಗೂ ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವರ, ಕಾವ್ಯ ವಿಭಾಗದಲ್ಲಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಾಹಿತಿ ವಿಕ್ರಮ್ ವಿಸಾಜಿ ಹಾಗೂ ಕವಯಿತ್ರಿ ಸಬಿತಾ ಬನ್ನಾಡಿ ಕಾರ್ಯನಿರ್ವಹಿಸಿದ್ದರು.
ಕಥಾ ವಿಭಾಗದಲ್ಲಿ ಅತ್ಯುತ್ತಮ ಕೃತಿಗೆ ನೀಡುವ ಪ್ರಶಸ್ತಿಯನ್ನು ರಾಯಚೂರಿನ ಡಾ.ಚಿದಾನಂದ ಸಾಲಿ ಅವರ ಹೊಗೆಯ ಹೊಳೆಯಿದು ತಿಳಿಯದು ಕೃತಿ ಆಯ್ಕೆಯಾಗಿದ್ದು, ಡಾ.ಚಿದಾನಂದ ಸಾಲಿ ಅವರಿಗೆ ರೂ.೧೦ಸಾವಿಗರ ನಗದು ಹಣವನ್ನು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಕಾವ್ಯ ವಿಭಾಗದಲ್ಲಿ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಬೆಂಗಳೂರಿನ ಕವಯಿತ್ರಿ ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್ ಮತ್ತು ಗದಗಿನ ಸಿದ್ದು ಸತ್ಯಣ್ಣನವರ ಅವರ ಗಾಳಿಯ ಮಡಿಲು ಕೃತಿಗಳು ಹಂಚಿಕೊಂಡಿವೆ. ಈ ಇಬ್ಬರು ಕವಿಗಳಿಗೆ ತಲಾ ರೂ.೫ಸಾವಿಗರ ನಗದು ಹಣವನ್ನು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಮಾ.೨೬ರಂದು ಮಾನ್ವಿಯ ಟೌನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮವನ್ನು ಮೈಸೂರಿನ ಹಿರಿಯ ಸಾಹಿತಿ ಜಿ.ಪಿ.ಬಸವರಾಜು ಉದ್ಘಾಟಿಸುವರು. ಸಾಹಿತಿಗಳಾದ ವಿಕ್ರಮ್ ವಿಸಾಜಿ ಹಾಗೂ ಟಿ.ಎಸ್.ಗೊರವರ, ನಿವೃತ್ತ ಜಿಲ್ಲಾ ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಾದ ಎಂ.ಎ.ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಡಾ.ಯಂಕನಗೌಡ ಬೊಮ್ಮನ್ಹಾಳ ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ ಟೌನ್ ಹಾಲ್ ಆವರಣದಲ್ಲಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಾರ್ಥನಾ ದತ್ತಿ ಸಂಸ್ಥೆಯ ಸಂಚಾಲಕ ಬಸವರಾಜ ಭೋಗಾವತಿ, ಇತರ ಪದಾಧಿಕಾರಿಗಳಾದ ಎಂ.ಎ.ಪಾಟೀಲ, ಲಕ್ಷ್ಮೀಕಾಂತ ಪಾಟೀಲ, ಬಿ.ಸಂತೋಷ ಹೂಗಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.