ಮಾ.೨೫ ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಅಗತ್ಯ ಸಿದ್ಧತೆಗೆ ಎಡಿಸಿ ಸೂಚನೆ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಮಾ. ೨೦ : ಜಿಲ್ಲೆಯಲ್ಲಿ ಮಾ.೨೫ ರಿಂದ ಏಪ್ರಿಲ್ ೦೬ ರವರೆಗೆ ಎಸ್ ಎಸ್ ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಎ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಒಟ್ಟು ೭೮ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ನಿಯೋಜನೆಗೊಂಡಿರುವ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸಿಟ್ಟಿಂಗ್ ಸ್ಕ್ಯಾಡ್, ಮಾರ್ಗಾಧಿಕಾರಿಗಳು ಸೇರಿದಂತೆ ಪ್ರತಿ ಅಧಿಕಾರಿ ತಮ್ಮ ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಅವರು ಸೂಚನೆ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಆಸನ, ಕುಡಿಯುವ ನೀರು ಸೇರಿದಂತೆ ಇತರೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತನ್ನು ಪೊಲೀಸ್ ಇಲಾಖೆಯಿಂದ ಒದಗಿಸಲಾಗುವುದು. ವಾಹನ ವ್ಯವಸ್ಥೆಯನ್ನು ತಮ್ಮ ವತಿಯಿಂದ ಮಾಡಲಾಗುವುದು. ಸುಗಮ ಪರೀಕ್ಷೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗುವುದು. ಪ್ರತಿ ಹಂತದಲ್ಲಿ ನಿಯೋಜಿತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಶಿಸ್ತಿನಿಂದ ನಿರ್ವಹಿಸುವ ಮೂಲಕ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚನೆ ನೀಡಿದರು.ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ಪರೀಕ್ಷೆ ಕೂಡ ಒಂದು ಮಿನಿ ಚುನಾವಣೆ ಇದ್ದ ಹಾಗೆ. ವಿದ್ಯಾರ್ಥಿಗಳು ನಿರ್ಭೀತರಾಗಿ, ಉತ್ತಮವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆಗಳು ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.ಜಿ.ಪಂ ಉಪಕಾರ್ಯದರ್ಶಿ ದಾಸೇಗೌಡ, ಡಯಟ್ ಪ್ರಾಂಶುಪಾಲÀ ಬಸವರಾಜಪ್ಪ, ಆರ್‌ಸಿಸಿಹೆಚ್ ಅಧಿಕಾರಿ ಡಾ. ನಾಗರಾಜ ನಾಯ್ಕ್ ಮಾತನಾಡಿದರು.