ಮಾ.೧೫ ಕ್ಕೆ ನಿವೃತ್ತ ಪಿಂಚಣಿ ನೌಕರರ ಪ್ರತಿಭಟನೆ

ದಾವಣಗೆರೆ.ಮಾ.೧೩: ನಿವೃತ್ತ ಪಿಂಚಣಿ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ೪ ತಿಂಗಳ ಗಡುವು ನೀಡಿದ್ದರೂ  ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಪಿಎಸ್ ೯೫ ರಾಷ್ಟ್ರೀಯ ಸಂಘರ್ಷ ಸಮಿತಿ ಜಿಲ್ಲಾ ಘಟಕವು ದೂರಿತು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಎಂ. ಮರುಳಸಿದ್ಧಯ್ಯ, ಈ ಕುರಿತು ನವೆಂಬರ್ ೨೬ರಂದು ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ರಾಜ್ಯ ಮಟ್ಟದ ನಿವೃತ್ತ ನೌಕರರ ಸಮಾವೇಶವನ್ನು ರಾಷ್ಟ್ರಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಪಿಂಚಣಿ ಗೆ ಒತ್ತಾಯಿಸಲಾಗಿತ್ತು. ಆದರೆ ಪಿ.ಎಫ್. ಸಂಸ್ಥೆ ನ್ಯಾಯಾಲಯದ ಆದೇಶ ಪರಿಗಣಿಸಿ ಪಿಂಚಣಿ ದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ನೀಡಿಲ್ಲ ಎಂದರು.ನ್ಯಾಯಾಲಯ ನೀಡಿದ್ದ ೪ ತಿಂಗಳ ಗಡುವು ಮುಗಿದಿದ್ದು, ಇದೇ ಮಾ. ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಗಾಂಧಿ ಸರ್ಕಲ್ ನಲ್ಲಿ  ರಸ್ತೆತಡೆ ನಡೆಸಲಾಗುವುದು ಎಂದು ತಿಳಿಸಿದರು. ಇದಲ್ಲದೇ ನಮಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಕೂಡ ದೊರೆತಿಲ್ಲ. ಮೂವತ್ತು ವರ್ಷ ಕೆಲಸ ಮಾಡಿದ್ದರೂ ಕೇವಲ ೨,೬೦೦ ರೂಪಾಯಿ ಮಾತ್ರ ಪಿಂಚಣಿ ನೀಡಲಾಗುತ್ತಿದ್ದು, ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಕನಿಷ್ಠ ೭,೫೦೦ ರೂಪಾಯಿ ಹಾಗೂ ಡಿಎ ನೀಡಬೇಕು ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು ಎಂಬುದನ್ನು ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ಟಿ. ಮಂಜುನಾಥ್ ಪುಟಗನಾಳ್ ಮಾತನಾಡಿ, ನಮ್ಮದೇ  ಪಿಎಫ್ ಹಣ ೫ಲಕ್ಷ ಕೋಟಿ ರೂಪಾಯಿಗೂ ಅಧಿಕವಿದೆ. ಅದಕ್ಕೆ ಬರುವ ಬಡ್ಡಿ ಹಣವನ್ನು ಹೆಚ್ಚುವರಿ ಪಿಂಚಣಿ ನೀಡಿದರೂ ಆಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ, ಮಲ್ಲಿಕಾರ್ಜುನಯ್ಯ ತಂಗಡಗಿ, ಎಂ. ಬಸವರಾಜ್ ಉಪಸ್ಥಿತರಿದ್ದರು