
ಬೆಂಗಳೂರು,ಮಾ.೯:ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇದೇ ತಿಂಗಳ ೧೨ ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಚುನಾವಣಾ ಹೊಸ್ತಿಲಲ್ಲಿ ಹಳೇ ಮೈಸೂರು ಭಾಗದಲ್ಲಿ ಮೋದಿ ಅವರ ಆಗಮನ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ-ಹುರುಪನ್ನು ಹೆಚ್ಚಿಸಿದೆ.
ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ ನಂತರ ಮಂಡ್ಯದಲ್ಲಿ ರೋಡ್ ಶೋ ನಡೆಸಿ ಬಿಜೆಪಿಗೆ ಬಲ ತುಂಬುವ ಕೆಲಸ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ಧತೆಗಳನ್ನು ನಡೆಸಿದ್ದು, ಇಡೀ ಮಂಡ್ಯ ಜಿಲ್ಲೆಯನ್ನು ಬಿಜೆಪಿ ಬಾವುಟಗಳಿಂದ ಸಿಂಗರಿಸಲಾಗಿದ್ದು, ಪ್ರಧಾನಿ ಅವರ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಇಡೀ ನಗರವನ್ನು ಕೇಸರಿ ನಗರವನ್ನಾಗಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ.
ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರು ಮಾ. ೧೨ ರಂದು ನಡೆಸಲಿರುವ ರೋಡ್ ಶೋ ಬಿಜೆಪಿ ಕಾರ್ಯಕರ್ತರಿಗೆ ಚೈತನ್ಯ ನೀಡುವ ಟಾನಿಕ್ ಆಗಲಿದ್ದು, ಚುನಾವಣೆಯಲ್ಲಿ ಕಮಲ ಅರಳಿಸಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಅವರ ರೋಡ್ ಶೋ ಮಂಡ್ಯದ ಪ್ರವಾಸಿ ಮಂದಿರದಿಂದ ಆರಂಭವಾಗಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ನಂದಾ ವೃತ್ತದ ಮೂಲಕ ಸಾಗಲಿದ್ದು, ಒಟ್ಟಾರೆ ೧.೫ ಕಿ.ಮೀ ಈ ರೋಡ್ ಶೋ ನಡೆಯಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಡೆಯಲಿದ್ದು, ೧೬ ಎಕರೆ ವಿಸ್ತೀರ್ಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಬಿಜೆಪಿ ನಿರ್ಧರಿಸಿದೆ. ಹೆದ್ದಾರಿ ಲೋಕಾರ್ಪಣೆ ನಂತರ ಪ್ರಧಾನಿಗಳು ಜನರನ್ನುದ್ದೇಶಿಸಿ ಭಾಷಣ ಮಾಡುವರು.
ಧಾರವಾಡ ಭೇಟಿ
ಮಂಡ್ಯ ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರಮೋದಿ ಅವರು ಧಾರವಾಡ ಜಿಲ್ಲೆಗೂ ಭೇಟಿ ನೀಡಲಿದ್ದು, ಅಲ್ಲಿ ಐಐಟಿ ನೂತನ ಕಟ್ಟಡ, ಹುಬ್ಬಳ್ಳಿಯ ನೂತನ ರೈಲ್ವೆ ಫ್ಲಾಟ್‌ಫಾರಂ, ತುಪ್ಪರಿಹಳ್ಳ ಏತನೀರಾವರಿ ಯೋಜನೆ, ಜಯದೇವ ಹೃದ್ರೋಗ ಸಂಸ್ಥೆ ಲೋಕಾರ್ಪಣೆ, ಜಲಜೀವನ್ ಮಿಷನ್ ಯೋಜನೆಗೆ ಚಾಲನೆ, ಸ್ಮಾರ್ಟ್‌ಸಿಟಿ ಕಾಮಗಾರಿಗಳ ಉದ್ಘಾಟನೆಗಳನ್ನು ನೆರವೇರಿಸಿದರು. ಇಲ್ಲೂ ಸಹ ಪ್ರಧಾನಿಗಳು ಸಾರ್ವಜನಿಕ ಭಾಷಣ ಮಾಡುವರು.