ಮಾ.೧೨: ಮಾದಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ರಾಯಚೂರು,ಫೆ.೨೩- ನವರತ್ನ ಯುವಕ ಸಂಘದ ವತಿಯಿಂದ ಮಾರ್ಚ್ ೧೨ ರಂದು ಸಂಜೆ ೬ ಗಂಟೆಗೆ ನಗರದ ಹರಿಜನವಾಡ ಸಮುದಾಯ ಭವನದಲ್ಲಿ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಆಂಜಿನೆಯ್ಯ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನವರತ್ನ ಯುವಕ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ೨೦೨೧-೨೨ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಿಂದ ಸ್ನಾತಕೋತ್ತರ ಪದವಿ ವರೆಗಿನ ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ರಾಯಚೂರು ನಗರವ್ಯಾಪ್ತಿಯ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ನಗರ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮಾರ್ಚ್ ೫ ರೊಳಗೆ ಬಯೋಡಾಟ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ೨ಪಾಸ್‌ಪೋರ್ ಅಳತೆಯ ಭಾವಚಿತ್ರ ದೊಂದಿಗೆ ಹರಿಜನವಾಡದ ಸಮುದಾಯ ಭವನದಲ್ಲಿ ಅರ್ಜಿ ಸಲ್ಲಿಸಬೇಕು.
ಈ ಕಾರ್ಯಕ್ರಮವನ್ನು ನಗರ ಶಾಸಕ ಡಾ. ಎಸ್.ಶಿವರಾಜ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ್, ನಗರಸಭೆ ಉಪಾಧ್ಯಕ್ಷ ನರಸಮ್ಮ ನರಸಿಂಹಲು ಮಾಡಗಿರಿ, ನಗರಸಭೆ ಸದಸ್ಯರಾದ ಹೇಮಲತಾ ಬೂದೆಪ್ಪ, ಎನ್.ಕೆ. ನಾಗರಾಜ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ, ವೀರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.