ಮಾ.೧೧ರಿಂದ ೧೪ರವರಗೆ ೩ನೇ ಅಖಿಲ ಭಾರತ ಸಮ್ಮೇಳನ

ರಾಯಚೂರು,ಮಾ.೧- ಮಾರ್ಚ್ ೧೧ ರಿಂದ ೧೪ ರವರೆಗೆ ೩ನೇ ಅಖಿಲ ಭಾರತ ಸಮ್ಮೇಳನವು ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣದ ಜಯನಗರದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆ ಸೂಗುರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾರ್ಚ್ ೧೧ ರಂದು ಕೃಷಿ ಮತ್ತು ರೈತ ಚಳುವಳಿಗಳ ಮೇಲೆ ಬಹು ರಾಷ್ಟ್ರೀಯ ಕಂಪನಿಗಳ ದಾಳಿ ಕುರಿತು ಪಶ್ಚಿಮ ಬಂಗಾಳದ ಹೌರದ ಶರತ್ ಸದನದಲ್ಲಿ ಅಂತರಾಷ್ಟ್ರೀಯ ವಿಚಾರಣಾ ಸಂಕಿರಣ ನಡೆಯಲಿದೆ. ಎಐಕೆಕೆಎಂಎಸ್ ಭಾಷಣಕಾರರೊಂದಿಗೆ ಅಮೇರಿಕಾ, ಬಾಂಗ್ಲಾದೇಶ, ನೇಪಾಳ ಮತ್ತು ಎಸ್ ಕೆ ಎಂ ಇತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದ ಅವರು ಅಖಿಲ ಭಾರತ ಅಧ್ಯಕ್ಷ ಸತ್ಯವನ್ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯನ್ನು ಬಿತ್ತನೆಗೂ ಮುನ್ನವೇ ಘೋಷಿಸಬೇಕು, ಮತ್ತು ಸುಗ್ಗಿಯ ಆರಂಭದಲ್ಲೇ ಖರೀದಿ ಕೇಂದ್ರವನ್ನು ತೆರೆಯಬೇಕು.ರೈತರಿಗೆ ಹಣವನ್ನು ತಕ್ಷಣವೇ ನೀಡಬೇಕು.ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿಯನ್ನು ಹೇರಬಾರದು.ಕೃಷಿ ಉತ್ಪನ್ನಗಳಲ್ಲಿ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೆ ತರಬೇಕು.
ಕೃಷಿ ಒಳಸುರಿಗಳ ಬೆಲೆಯನ್ನು ಇಳಿಸಬೇಕು, ಬೀಜ,ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸರ್ಕಾರವೇ ರಿಯಾಯಿತಿ ದರದಲ್ಲಿ ರೈತರಿಗೆ ಅವಶ್ಯಕತೆ ವಿರುವಷ್ಟು ವಿತರಿಸಬೇಕು.ಬಗರು ಹುಕುಂ ಸಾಗುವಳಿದಾರಿಗೆ ಕೂಡಲೇ ಹಕ್ಕು ಪತ್ರ ವಿತರಿಸಬೇಕು.ವಿದ್ಯುತ್ ಕಾಯ್ದೆ ೨೦೨೨ ಜಾರಿಗೊಳಿಸಬಾರದು.ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಬಾರದು. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ತಿಕ್ ಶಿಂಧೆ,ದುರ್ಗಣ್ಣ, ಶರಣಪ್ಪ ಇದ್ದರು.