ಮಾಹಿತಿ ಪ್ರಸಾರ ಸಾಧನಗಳ ಸದುಪಯೋಗ ಅಗತ್ಯ

ಕಲಬುರಗಿ:ಅ.26: ಜಗತ್ತಿನ ಯಾವುದೇ ಭಾಗದ ಮಾಹಿತಿಯನ್ನು ಎಲ್ಲೆಡೆ ಪ್ರಸರಿಸುವ ಸಾಧನಗಳಾದ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಇವುಗಳ ಮೂಲಕ ತಪ್ಪಾಗಿ ಪ್ರಸಾರವಾದರೆ ತೊಂದರೆಗಳು ಉಂಟಾಗುವುದರಿಂದ ಮಾಹಿತಿಯು ನಿಖರವಾಗಿರುವುದು ಅಗತ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

     ಅವರು ನಗರದ ಎಂ.ಎಂ.ಎನ್ ಟ್ಯೂಟೋರಿಯಲ್ಸ್ ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜರುಗಿದ 'ವಿಶ್ವ ಮಾಹಿತಿ ಪ್ರಸಾರ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಪ್ರಸ್ತುತವಾಗಿ ಅನೇಕ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಬಹಳ ವರ್ಷಗಳ ಹಿಂದೆಯೆ ಆಕಾಶವಾಣಿ, ದೂರದರ್ಶನ ಆರಂಭವಾಗಿ ಮಾಹಿತಿಯ ಪ್ರಸಾರ ಕಾರ್ಯ ಮಾಡುತ್ತಿವೆ. ಇಂಟರನೆಟ್ ವ್ಯಾಪಕವಾಗಿ ಹರಡುವ ಮೂಲಕ ಇಂದು ಮಾಹಿತಿ ತಂತ್ರಜ್ಞಾನದ ಕ್ರಾಂತಿ ಸಂಭವಿಸಿದೆ. ಎಲ್ಲೆಡೆ ಮೋಬೈಲ್ ಬಳಕೆ ವ್ಯಾಪಕವಾಗಿದ್ದು, ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್‍ಪ್, ಫೇಸ್‍ಬುಕ್, ಟ್ವಿಟರ್‍ನಂತಹ ಮುಂತಾದ ಜಾಲತಾಣಗಳ ಬಳಕೆ ಹೆಚ್ಚಾಗಿದೆಯೆಂದರು.

 ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ, ಭಯ ಹುಟ್ಟಿಸುವ ಸಂಗತಿಗಳು, ಉಪಯೋಗವಿಲ್ಲದ ಸಂದೇಶಗಳನ್ನು ಹರಡಿಸುವ ಬದಲು, ಸಮಾಜಮುಖಿ ಚಿಂತನೆಗಳು ಮತ್ತು ಅಂತಹ ಕಾರ್ಯಕ್ರಮಗಳು, ಜನರಿಗೆ, ಸಮಾಜಕ್ಕೆ ಉಪಯೋಗವಾಗುವ ವಿಚಾರಗಳನ್ನು ವಿನಿಮಯ ಮಾಡುವ ವೇದಿಕೆಯನ್ನಾಗಿ ಇವುಗಳನ್ನು ಬಳಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆಯಿದೆಯೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಅಮರ ಜಿ.ಬಂಗರಗಿ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.